ಮಂಗಳೂರು : ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಂಗಳೂರಿನ ಪಡೀಲ್ ಸಮೀಪದ ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಅವರ ಮೃತದೇಹ ಸುಮಾರು ಒಂದು ತಿಂಗಳ ಬಳಿಕ ಬುಧವಾರ ಮಂಗಳೂರಿಗೆ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ಶಡ್ರಕ್ ಅವರು ಒಂದೂವರೆ ವರ್ಷದ ಹಿಂದೆ ಉದ್ಯೋಗಕ್ಕಾಗಿ ಇಸ್ರೇಲ್ಗೆ ತೆರಳಿದ್ದರು. ಅಲ್ಲಿನ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಕ್ಟೋಬರ್ 16ರಂದು ರಾತ್ರಿ 8.49ಕ್ಕೆ ಪತ್ನಿಗೆ ಕೊನೆಯದಾಗಿ ಸಂದೇಶ ಕಳುಹಿಸಿದ ಬಳಿಕ ಅವರು ನಾಪತ್ತೆಯಾಗಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ.
ಭಾರತೀಯ ರಾಯಭಾರಿ ಕಚೇರಿಗೆ ದೂರು
ಶಡ್ರಕ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಕ್ಟೋಬರ್ 21ರಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು. ಅಲ್ಲದೆ, ಇಸ್ರೇಲ್ ಗಡಿ ಅಧಿಕಾರಿಗಳು, ಪ್ಯಾಲೆಸ್ತೀನ್, ಮಂಗಳೂರು ಪೊಲೀಸ್ ಆಯುಕ್ತರು, ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿ ಶಡ್ರಕ್ ಅವರನ್ನು ಪತ್ತೆಹಚ್ಚುವಂತೆ ಕೋರಿದ್ದರು.
ನಾಪತ್ತೆಯಾದ ಸುಮಾರು 15 ದಿನಗಳ ಬಳಿಕ ಅವರು ಮೃತಪಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿತ್ತು. ಬಳಿಕ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿದ್ದು, ಬುಧವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ. ನಂತರ ಶಕ್ತಿ ನಗರದ ಕಾರ್ಮಿಕ ಕಾಲನಿ ಸಮೀಪದ ಸಹೋದರಿಯ ನಿವಾಸದ ಬಳಿ ಅಂತಿಮ ದರ್ಶನಕ್ಕೆ ಇರಿಸಿ, ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಸಾವಿನ ಹಿಂದೆ ಅನುಮಾನ: ಕುಟುಂಬಸ್ಥರ ಆರೋಪ
ಶಡ್ರಕ್ ಅವರ ಸಾವು ಸಹಜವಲ್ಲ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ನಿಂದ ಬಂದ ವರದಿಯಲ್ಲಿ ಅಸಹಜ ಸಾವು ಎಂದು ಉಲ್ಲೇಖಿಸಲಾಗಿದೆಯಾದರೂ, ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ನೀಡಿಲ್ಲ ಎನ್ನಲಾಗಿದೆ.
‘ನನ್ನ ತಮ್ಮನ ಸಾವು ಸಹಜವಾಗಿ ಸಂಭವಿಸಿದ್ದಲ್ಲ. ಸಾವಿನ ಹಿಂದೆ ಅನುಮಾನಗಳಿವೆ. ಈ ಬಗ್ಗೆ ಸಮರ್ಪಕ ತನಿಖೆ ನಡೆಯಬೇಕು’ ಎಂದು ಮೃತರ ಹಿರಿಯ ಸಹೋದರಿ ಆಶಾ ಒತ್ತಾಯಿಸಿದ್ದಾರೆ.
ಮೃತರ ಸ್ನೇಹಿತ ಹೇಮಂತ್ ಕೂಡ ಸಾವಿನ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದು, ಶಡ್ರಕ್ ಅವರೊಂದಿಗೆ ಇದ್ದವರು ಹಾಗೂ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಸಮರ್ಪಕ ಮಾಹಿತಿ ಲಭಿಸಿಲ್ಲ ಎಂದು ತಿಳಿಸಿದ್ದಾರೆ.
ಹಬ್ಬಕ್ಕೆ ಸರ್ಪ್ರೈಸ್ ನೀಡುವುದಾಗಿ ಹೇಳಿದ್ದ ಮಗ!
ಮಗನನ್ನು ಕಳೆದುಕೊಂಡ ತಾಯಿ ರತ್ನಾ ಅವರ ನೋವು ಹೃದಯವಿದ್ರಾವಕವಾಗಿದೆ. ಮುಂದಿನ ತಿಂಗಳು ಹಬ್ಬದ ಸಂದರ್ಭದಲ್ಲಿ ಮನೆಗೆ ಬಂದು ಸರ್ಪ್ರೈಸ್ ನೀಡುವುದಾಗಿ ಮಗ ಹೇಳಿದ್ದ. ಆದರೆ, ಈ ರೀತಿ ಆಗುತ್ತದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಅಪ್ಪನೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುವಾಗ ಚಾಕಲೇಟ್, ಶೂ ಮತ್ತು ಬಟ್ಟೆ ತರುವುದಾಗಿ ಹೇಳಿದ್ದರು. ಆದರೆ, ಆ ಬಳಿಕ ಅಪ್ಪ ನಮ್ಮೊಂದಿಗೆ ಮಾತನಾಡಲೇ ಇಲ್ಲ ಎಂದು ಪುತ್ರಿ ಕಣ್ಣೀರಿಟ್ಟಿದ್ದಾರೆ.
ಮೃತರು ತಾಯಿ ರತ್ನಾ, ಪತ್ನಿ ಡೈಸಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.
ಶಡ್ರಕ್ ಅವರ ನಿಗೂಢ ಸಾವಿನ ಹಿಂದಿನ ಸತ್ಯ ಹೊರಬರಬೇಕು ಮತ್ತು ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂಬುದು ಕುಟುಂಬಸ್ಥರ ಒತ್ತಾಯವಾಗಿದೆ.

