ನವದೆಹಲಿ : ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಭಾರೀ ಏರಿಕೆ ಕಂಡಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಶಾಕ್ ನೀಡಿವೆ. ಕೇಂದ್ರ ಸರ್ಕಾರವು ಅಮೂಲ್ಯ ಲೋಹಗಳ ಮೇಲಿನ ಆಮದು ಸುಂಕವನ್ನು ದಿಢೀರ್ ಹೆಚ್ಚಿಸಿದ ಪರಿಣಾಮ ಬುಧವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಶೇಕಡಾ 6ಕ್ಕಿಂತ ಹೆಚ್ಚು ಏರಿಕೆ ಕಂಡಿವೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಜೂನ್ ಫ್ಯೂಚರ್ಸ್ ಚಿನ್ನದ ಬೆಲೆ 10 ಗ್ರಾಂಗೆ ₹1,62,648ಕ್ಕೆ ತಲುಪಿದ್ದು, ಶೇಕಡಾ 6ರಷ್ಟು ‘ಅಪ್ಪರ್ ಸರ್ಕ್ಯೂಟ್’ ದಾಖಲಾಗಿದೆ. ಇದೇ ವೇಳೆ ಬೆಳ್ಳಿಯ ಬೆಲೆಯೂ ಏರಿಕೆ ಕಂಡು ಪ್ರತಿ ಕೆಜಿಗೆ ₹2,95,805 ರಂತೆ ವಹಿವಾಟು ನಡೆಯುತ್ತಿದೆ.
ಆಮದು ಸುಂಕ ಹೆಚ್ಚಳ : ಚಿನ್ನ ಮತ್ತು ಬೆಳ್ಳಿಯ ಮೇಲಿನ ಒಟ್ಟು ಆಮದು ತೆರಿಗೆಯನ್ನು 6%ರಿಂದ 15%ಕ್ಕೆ ಏರಿಸಲಾಗಿದೆ. ಇದರಲ್ಲಿ 10% ಮೂಲ ಕಸ್ಟಮ್ಸ್ ಸುಂಕ ಹಾಗೂ 5% ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಸೇರಿದೆ.
ಭಾರತದಲ್ಲಿ ಗೋಲ್ಡ್ ETF ಹೂಡಿಕೆ ಮಾರ್ಚ್ ತ್ರೈಮಾಸಿಕದಲ್ಲಿ ಶೇ.186ರಷ್ಟು ಏರಿಕೆ ಕಂಡಿದ್ದು, ಚಿನ್ನದ ಮೇಲಿನ ಹೂಡಿಕೆದಾರರ ಆಸಕ್ತಿ ಹೆಚ್ಚಿದೆಯೆನ್ನಲಾಗಿದೆ.ಜಾಗತಿಕ ಮಾರುಕಟ್ಟೆಯಲ್ಲೂ ಅನಿಶ್ಚಿತತೆ ಅಮೆರಿಕ–ಇರಾನ್ ನಡುವಿನ ಸಂಘರ್ಷ ಭೀತಿ ಮತ್ತು ಹೊರ್ಮುಜ್ ಜಲಸಂಧಿಯ ಪರಿಸ್ಥಿತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿರುವ ಹಿನ್ನೆಲೆ ಫೆಡರಲ್ ರಿಸರ್ವ್ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಕಡಿಮೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಜ್ಞರ ಅಂದಾಜಿನ ಪ್ರಕಾರ ಚಿನ್ನದ ಬೆಲೆ 10 ಗ್ರಾಂಗೆ ₹1.68 ಲಕ್ಷದಿಂದ ₹1.70 ಲಕ್ಷದವರೆಗೆ ಏರಬಹುದು. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹3 ಲಕ್ಷದ ಗಡಿಯನ್ನು ಮುಟ್ಟುವ ಸಾಧ್ಯತೆ ಇದೆ. ಬೆಲೆ ಇಳಿಕೆಯ ಸಮಯದಲ್ಲಿ ಖರೀದಿ ಮಾಡುವುದು ದೀರ್ಘಾವಧಿ ಹೂಡಿಕೆಗೆ ಲಾಭದಾಯಕ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಚಿನ್ನಕ್ಕೆ ₹1,59,000 – ₹1,60,000 ಮಟ್ಟದಲ್ಲಿ ಬೆಂಬಲ (Support) ₹1,65,000 – ₹1,67,000 ಮಟ್ಟದಲ್ಲಿ ಪ್ರತಿರೋಧ (Resistance) ಕಂಡುಬರುತ್ತಿದೆ.


