ಚೆನ್ನೈ : ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಕಾರಾಗೃಹದಿಂದ 17 ಮಂದಿ ವಿಚಾರಣಾಧೀನ ಕೈದಿಗಳು ಸೋಮವಾರ ರಾತ್ರಿ ಪರಾರಿಯಾಗಿರುವ ಘಟನೆ ಭಾರೀ ಸಂಚಲನ ಮೂಡಿಸಿದೆ. ಈ ಘಟನೆ ರಾಜ್ಯದಲ್ಲಿ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿ ಪರಾರಿ
ಸೋಮವಾರ ರಾತ್ರಿ ಸುಮಾರು 10.30ರ ವೇಳೆಗೆ ಕೈದಿಯೊಬ್ಬರಿಗೆ ಅನಾರೋಗ್ಯವಾಗಿದೆ ಎಂದು ಇತರ ಕೈದಿಗಳು ಜೈಲು ಸಿಬ್ಬಂದಿಯ ನೆರವು ಕೋರಿದ್ದಾರೆ. ಸಿಬ್ಬಂದಿ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ಕೈದಿಗಳು ಅವರ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಇಬ್ಬರು ಜೈಲು ಸಿಬ್ಬಂದಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
13 ಕೈದಿಗಳ ಬಂಧನ, ಉಳಿದವರಿಗಾಗಿ ಶೋಧ
ಘಟನೆ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪರಾರಿಯಾದವರ ಪೈಕಿ 13 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ. ಉಳಿದ ನಾಲ್ವರು ಕೈದಿಗಳಿಗಾಗಿ ಶೋಧ ಮುಂದುವರಿದಿದೆ.
ಕೊಲೆ, ಕಳ್ಳತನ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಕೈದಿಗಳ ಪತ್ತೆಗಾಗಿ ದಕ್ಷಿಣ ವಲಯ ಐಜಿ ವಿಜಯೇಂದ್ರ ವಿದಾರಿ ನೇತೃತ್ವದಲ್ಲಿ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಕೇರಳ ಗಡಿ ಭಾಗದ ಇಡುಕ್ಕಿ ಅರಣ್ಯ ಪ್ರದೇಶಗಳಲ್ಲೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಜೈಲಿನ ಭದ್ರತೆಯಲ್ಲಿನ ಲೋಪದ ಕುರಿತು ಈ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

