Wednesday, October 28, 2026
Homeಜಿಲ್ಲೆಬೆಂಗಳೂರು : ಕರ್ನಾಟಕದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ: 4.55 ಕೋಟಿ ಮತದಾರರು, ಎಸ್‌ಐಆರ್‌ ಬಳಿಕ...

ಬೆಂಗಳೂರು : ಕರ್ನಾಟಕದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ: 4.55 ಕೋಟಿ ಮತದಾರರು, ಎಸ್‌ಐಆರ್‌ ಬಳಿಕ 99.32 ಲಕ್ಷದ ವ್ಯತ್ಯಾಸ ; ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚು!

ಬೆಂಗಳೂರು : ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಕರ್ನಾಟಕದಲ್ಲಿ ಪ್ರಸ್ತುತ 4.55 ಕೋಟಿ ಮತದಾರರು ಇದ್ದಾರೆ. ಎಸ್‌ಐಆರ್‌ಗೂ ಮುನ್ನ ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 99.32 ಲಕ್ಷ ಮತದಾರರ ವ್ಯತ್ಯಾಸ ಕಂಡುಬಂದಿದೆ.

ಸುಮಾರು 130 ದಿನಗಳ ಕಾಲ ನಡೆದ ಈ ಪ್ರಕ್ರಿಯೆಯಲ್ಲಿ 2 ಲಕ್ಷಕ್ಕೂ ಅಧಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಆಗಸ್ಟ್‌ನಲ್ಲಿ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 4.46 ಕೋಟಿ ಮತದಾರರಿದ್ದು, ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 4.55 ಕೋಟಿಗೆ ಏರಿಕೆಯಾಗಿದೆ.

ಅಂತಿಮ ಮತದಾರರ ಪಟ್ಟಿಯ ಪ್ರಮುಖ ಅಂಕಿಅಂಶಗಳು

4.55 ಕೋಟಿ – ರಾಜ್ಯದ ಒಟ್ಟು ಮತದಾರರು

2.25 ಕೋಟಿ – ಪುರುಷ ಮತದಾರರು

2.29 ಕೋಟಿ – ಮಹಿಳಾ ಮತದಾರರು

99.32 ಲಕ್ಷ – ಎಸ್‌ಐಆರ್‌ಗೂ ಮುನ್ನ ಮತ್ತು ಅಂತಿಮ ಪಟ್ಟಿಯ ನಡುವಿನ ವ್ಯತ್ಯಾಸ

16.39 ಲಕ್ಷ – ನಿಧನ ಹೊಂದಿದ ಮತದಾರರ ಮಾಹಿತಿ

7.09 ಲಕ್ಷ – ನಕಲಿ ಮತದಾರರೆಂದು ಗುರುತಿಸಲಾದವರ ಮಾಹಿತಿ

65.45 ಲಕ್ಷ – ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರ ಮಾಹಿತಿ

ಕರಡು ಪಟ್ಟಿಯಿಂದ ಅಂತಿಮ ಪಟ್ಟಿಗೆ 8.19 ಲಕ್ಷ ಮತದಾರರ ಹೆಚ್ಚಳ

ಕರಡು ಮತದಾರರ ಪಟ್ಟಿಯಿಂದ ಅಂತಿಮ ಪಟ್ಟಿಯವರೆಗೆ 10.08 ಲಕ್ಷ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದ್ದು, 1.88 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮೂಲಕ ಕರಡು ಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ 8.19 ಲಕ್ಷ ಮತದಾರರು ಹೆಚ್ಚಳವಾಗಿದ್ದಾರೆ.

ಹೆಸರು ಬಿಟ್ಟುಹೋದವರಿಗೆ ಮತ್ತೆ ಅವಕಾಶ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನುಕುಮಾರ್ ತಿಳಿಸಿದ್ದಾರೆ. ಪಟ್ಟಿಯಲ್ಲಿ ಹೆಸರು ಇಲ್ಲದವರು ಫಾರ್ಮ್-6 ಭರ್ತಿ ಮಾಡಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಅರ್ಹ ಮತದಾರರ ಹೆಸರು ಕೈಬಿಡದಂತೆ ಪರಿಶೀಲನೆ ನಡೆಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮತದಾರರ ವಿವರ

ಎಸ್‌ಐಆರ್‌ ಬಳಿಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಂತಿಮ ಮತದಾರರ ಪಟ್ಟಿಯೂ ಪ್ರಕಟಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ಒಟ್ಟು 26,92,591 ಮತದಾರರು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ

  • ಒಟ್ಟು ಮತದಾರರು: 16,78,448
  • ಪುರುಷರು: 8,23,198
  • ಮಹಿಳೆಯರು: 8,55,232
  • ತೃತೀಯ ಲಿಂಗಿಗಳು: 18
  • ಪಟ್ಟಿಯಿಂದ ಕೈಬಿಟ್ಟ ಹೆಸರುಗಳು: 1,25,318

ಉಡುಪಿ ಜಿಲ್ಲೆ

  • ಒಟ್ಟು ಮತದಾರರು: 10,14,143
  • ಪುರುಷರು: 4,91,109
  • ಮಹಿಳೆಯರು: 5,23,023
  • ತೃತೀಯ ಲಿಂಗಿಗಳು: 11
  • ಪಟ್ಟಿಯಿಂದ ಕೈಬಿಟ್ಟ ಹೆಸರುಗಳು: 49,733

ಎರಡೂ ಜಿಲ್ಲೆಗಳಲ್ಲಿ ಒಟ್ಟು 1,75,051 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕೈಬಿಟ್ಟ ಹೆಸರುಗಳ ಬಗ್ಗೆ ಪಾರದರ್ಶಕತೆಗೆ ಆಗ್ರಹ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಪ್ರತಿಯೊಬ್ಬರ ಮಾಹಿತಿಯನ್ನೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ಯಾವ ಕಾರಣಕ್ಕೆ ಹೆಸರು ತೆಗೆದುಹಾಕಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular