ಮಂಗಳೂರು : ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಸೈಬರ್ ವಂಚಕರು ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ 75 ವರ್ಷದ ವೃದ್ಧೆಗೆ ₹2 ಕೋಟಿ ವಂಚಿಸಿರುವ ಘಟನೆ ನಡೆದಿದೆ.
ಸೆ.25ರಂದು ವೃದ್ಧೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಮುಂಬೈ ಕೊಲಾಬಾ ಪೊಲೀಸ್ ಠಾಣೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮನಿ ಲಾಂಡರಿಂಗ್, ಡ್ರಗ್ಸ್ ವ್ಯವಹಾರ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ವೃದ್ಧೆ ಭಾಗಿಯಾಗಿರುವುದಾಗಿ ಆರೋಪಿಸಿ ಬೆದರಿಸಿದ್ದಾನೆ.
ಬಳಿಕ ವಾಟ್ಸ್‌ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕಿಸಿದ ಮತ್ತೊಬ್ಬ ವ್ಯಕ್ತಿ ತಾನು ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಪ್ರಕರಣದಿಂದ ಪಾರು ಮಾಡಲು ಸಹಾಯ ಮಾಡುವುದಾಗಿ ನಂಬಿಸಿ, ವೃದ್ಧೆಯ ಬ್ಯಾಂಕ್ ಖಾತೆ ಮತ್ತು ಆಸ್ತಿ ವಿವರಗಳನ್ನು ಪಡೆದುಕೊಂಡಿದ್ದಾನೆ.
ಸೆ.25ರಿಂದ ಅ.5ರವರೆಗೆ ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹2 ಕೋಟಿ ವರ್ಗಾಯಿಸಲಾಗಿದೆ. ಬಳಿಕ ಸ್ನೇಹಿತರೊಬ್ಬರಿಗೆ ವಿಷಯ ತಿಳಿಸಿದಾಗ ವೃದ್ಧೆಗೆ ತಾನು ವಂಚನೆಗೊಳಗಾಗಿರುವುದು ತಿಳಿದುಬಂದಿದೆ.
ಈ ಸಂಬಂಧ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

