ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಸಭೆಯಲ್ಲಿ ಸುವೇಂದು ಅಧಿಕಾರಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಸಾಮಿಕ್ ಭಟ್ಟಾಚಾರ್ಯ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಉಪಮುಖ್ಯಮಂತ್ರಿಗಳಾಗಿ ಶಂಕರ್ ಘೋಷ್, ಅಗ್ನಿಮಿತ್ರಾ ಪಾಲ್?
ವರದಿಗಳ ಪ್ರಕಾರ, ಸಿಲಿಗುರಿ ಕ್ಷೇತ್ರದ ಶಾಸಕ ಶಂಕರ್ ಘೋಷ್ ಹಾಗೂ ಅಸನ್ಸೋಲ್ ದಕ್ಷಿಣ ಕ್ಷೇತ್ರದ ಶಾಸಕೆಯಾಗಿರುವ ಅಗ್ನಿಮಿತ್ರಾ ಪಾಲ್ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡುವ ಸಾಧ್ಯತೆ ಇದೆ.
ಐತಿಹಾಸಿಕ ಗೆಲುವಿನ ಬಳಿಕ ಬಿಜೆಪಿ ಸರ್ಕಾರ
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ಸಾಧಿಸಿ, ಮಮತಾ ಬಾನೆರ್ಜಿ ನೇತೃತ್ವದ ಟಿಎಂಸಿಯ 15 ವರ್ಷದ ಆಡಳಿತಕ್ಕೆ ಅಂತ್ಯ ಹಾಡಿದೆ.2021ರಿಂದ 2026ರವರೆಗೆ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿದ್ದ ಸುವೆಂದು ಅಧಿಕಾರಿ , 2021ರಲ್ಲಿ ನಂದಿಗ್ರಾಮ ಹಾಗೂ 2026ರಲ್ಲಿ ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಜಯ ಸಾಧಿಸಿ ಪ್ರಮುಖ ನಾಯಕನಾಗಿ ಹೊರಹೊಮ್ಮಿದ್ದರು.
ಅಮಿತ್ ಶಾ ಕೋಲ್ಕತಾಗೆ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬೆಳಿಗ್ಗೆ ಕೋಲ್ಕತಾಗೆ ಆಗಮಿಸಿ, ನೆತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರಿಂದ ಸ್ವಾಗತ ಪಡೆದರು. ಬಳಿಕ ಅವರು ಉತ್ತರ 24 ಪರಗಣ ಜಿಲ್ಲೆಯ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಶನಿವಾರ ಪ್ರಮಾಣವಚನ
ಹೊಸ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭವು ಶನಿವಾರ ಬೆಳಿಗ್ಗೆ 10 ಗಂಟೆಗೆ ಕೋಲ್ಕತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಪ್ರಧಾನಿ Narendra Modi, ಅಮಿತ್ ಶಾ ಹಾಗೂ ಬಿಜೆಪಿ ಆಡಳಿತದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಸಾಧ್ಯತೆ ಇದೆ.
ಚುನಾವಣೋತ್ತರ ಹಿಂಸಾಚಾರ
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ ಪ್ರದೇಶದಲ್ಲಿ ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕರನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೂಡ ನಡೆದಿದೆ.


