ಅಯೋಧ್ಯೆ : ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಇದೀಗ ದೇವಾಲಯದ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಕಮಿಷನ್ ದಂಧೆ ಮತ್ತು ಉದ್ಯೋಗ ಹಗರಣದತ್ತ ತನಿಖೆ ವಿಸ್ತರಿಸಿದೆ.
ಮಂದಿರದ ಮಾಜಿ ಟ್ರಸ್ಟಿ ಅನಿಲ್ ಮಿಶ್ರಾ ಅವರು ಉದ್ಯೋಗ ನೀಡುವ ಭರವಸೆ ನೀಡಿ ಅಭ್ಯರ್ಥಿಗಳಿಂದ ಭಾರಿ ಪ್ರಮಾಣದ ಕಮಿಷನ್ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರ ಶಿಫಾರಸಿನ ಮೇರೆಗೆ ಸುಮಾರು 125 ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಇದಕ್ಕಾಗಿ ಅಭ್ಯರ್ಥಿಗಳಿಂದ ಹಣ ಪಡೆದಿರುವ ಶಂಕೆ ವ್ಯಕ್ತವಾಗಿದೆ.
ದೇಣಿಗೆ ಹಣ ಕಳವು ಪ್ರಕರಣದಲ್ಲಿ ಬಂಧಿತರ ವಿಚಾರಣೆ ವೇಳೆ ಅನಿಲ್ ಮಿಶ್ರಾ ಅವರ ಹೆಸರು ಪದೇ ಪದೇ ಕೇಳಿಬಂದಿದ್ದು, ಅವರ ಆದಾಯದ ಮೂಲ ಹಾಗೂ ಆಸ್ತಿ ವಿವರಗಳನ್ನೂ ಎಸ್‌ಐಟಿ ಪರಿಶೀಲಿಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬ್ಯಾಂಕ್ ಹಾಗೂ ನಗದು ಎಣಿಕೆ ವಿಭಾಗದ ಎಂಟು ಮಂದಿಯನ್ನು ಬಂಧಿಸಿರುವ ಪೊಲೀಸರು, ಸುಮಾರು 80 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಅನಿಲ್ ಮಿಶ್ರಾ ಅವರ ಸಂಬಂಧಿಕರಾದ ಅನುಕಲ್ಪ್ ಮಿಶ್ರಾ ಮತ್ತು ಲವಕುಶ್ ಮಿಶ್ರಾ ಕೂಡ ಸೇರಿದ್ದಾರೆ.
ಇದೇ ವೇಳೆ, ಲವಕುಶ್ ಮಿಶ್ರಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು, ರಾಮಮಂದಿರದ ಕಾಣಿಕೆ ಡಬ್ಬ, ಕ್ಯೂಆರ್ ಕೋಡ್ ಹೊಂದಿದ್ದ ಕಾಣಿಕೆ ಪೆಟ್ಟಿಗೆಗಳು ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾಕುಂಭಮೇಳದ ವೇಳೆ ಲಕ್ಷಾಂತರ ಭಕ್ತರು ಸಲ್ಲಿಸಿದ್ದ ದೇಣಿಗೆಯನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ (ED)ದ ನೆರವನ್ನೂ ಕೋರಲಾಗಿದೆ. ಪೊಲೀಸರು ಈ ಕುರಿತು ಇಡಿಗೆ ಪತ್ರ ಬರೆದು ಹಣಕಾಸು ಅಕ್ರಮದ ಆಯಾಮದಲ್ಲಿಯೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.


