ಉಳ್ಳಾಲ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹರೇಕಳ ಗ್ರಾಮಕ್ಕೆ ಇಂದು ಭೇಟಿ ನೀಡಲಿದ್ದು,ಗ್ರಾಮ ಪಂಚಾಯತ್ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ”, ಡಾ.ಜಿ. ಶಂಕರ್ ಗ್ರಾಮಕ್ಕೆ ಕೊಡುಗೆಯ ರೂಪದಲ್ಲಿ ನಿರ್ಮಿಸಿದ ಆಸ್ಪತ್ರೆ, ಹರೇಕಳ -ಅಡ್ಯಾರ್ ಸಂಪರ್ಕ
ಸೇತುವೆ ಹಾಗೂ ಡ್ಯಾಂನ ವೀಕ್ಷಣೆ ಮಾಡಲಿದ್ದು ಬಳಿಕ ಹರೇಕಳ ಕಡವಿನ ಬಳಿ ನಡೆಯುವ ಸಾರ್ವಜನಿಕ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ವಿಧಾನ ಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹೇಳಿದರು.

ಹರೇಕಳ ಕಡವಿನ ಬಳಿ ಮಾಧ್ಯಮದ ಜತೆಗೆ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರದ ಆಡಳಿತದಿಂದ ಜನತೆ ಭ್ರಮನಿರಸನಗೊಂಡಿದ್ದಾರೆ.ಕೇಂದ್ರದಲ್ಲಿರುವ ನಮ್ಮ ರಾಜ್ಯದ ಮಂತ್ರಿಗಳು, ಸಂಸದರು ಚಕಾರ ಎತ್ತಿಲ್ಲ. ಬೀಡಿ ಕಾರ್ಮಿಕರು,ರೈತರು,ಮೀನುಗಾರರು ಸೇರಿದಂತೆ ಜನಸಾಮ್ಯಾನರ ಬದುಕು ಹೈರಾಣವಾಗುತ್ತಿರುವ ಕುರಿತು ಎಲ್ಲೂ ಮಾತನಾಡುತ್ತಿಲ್ಲ.ಸರಕಾರಿ ನೌಕರರಿಗೆ ವೇತನ ನೀಡದೆ ಸಂಕಷ್ಟ ತಂದಿದ್ದಲ್ಲದೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಸಾಮಾನ್ಯ ಜನರ ಬದುಕು ಹೈರಾಣಾಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಯಾವ ಸರಕಾರ ಹರೇಕಳದ ಸೇತುವೆ ಕಟ್ಟಿದೆ ಎಂಬುದು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಸುದ್ದಿ ದಾಖಲಾತಿ ಇದೆ. ಸೇತುವೆ ನಿರ್ಮಾಣದ ನಂತರ ತಾಂತ್ರಿಕ ಅಡೆತಡೆಯಿಂದ ಆದ ಕೆಲವೊಂದು ಅನಾಹುತಕ್ಕೆ ಹದಿನೈದು ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಬಿಜೆಪಿ ಸರಕಾರ ಹೌದು. ಇನ್ನುಳಿದಂತೆ ಸೇತುವೆ ಮಂಜೂರು ಮಾಡಿದ್ದೇ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದ ದಿನಗಳಲ್ಲಿ ಎಂಬುದನ್ನ ದಾಖಲೆಗಳಿಂದ ಅರಿತು ಕೊಳ್ಳಿ ಎಂದರು.ರಸ್ತೆ ಬದಿಯಲ್ಲಿ ಸಮರ್ಪಕ ಮೋರಿ ರಚಿಸದ ಬಿಜೆಪಿ ಆಡಳಿತ ಸೇತುವೆ ಮಾಡುತ್ತದೆ ಎಂಬುದು ಕನಸು ಎಂದರು.