ಬೆಳ್ತಂಗಡಿ : ಸಮಾಜ ಸೇವೆಯ ಹೆಸರಿನಲ್ಲಿ ಅಂಬ್ಯುಲೆನ್ಸ್ ಬಳಸಿಕೊಂಡು ಡ್ರಗ್ಸ್ ಸಾಗಾಟ ಮತ್ತು ಪೂರೈಕೆ ನಡೆಸುತ್ತಿದ್ದ ಆರೋಪ ಕೇಳಿಬಂದಿರುವ ಬೆಳ್ತಂಗಡಿ ಮೂಲದ ಅಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ತಲೆಮರೆಸಿಕೊಂಡಿರುವುದಾಗಿ ತಿಳಿದುಬಂದಿದೆ.
ಜೂನ್ 25ರಂದು ಮಂಗಳೂರಿನಲ್ಲಿ ಎಂಡಿಎಂಎ ಮಾದಕ ವಸ್ತುವಿನೊಂದಿಗೆ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಬಂಧನವಾಗಿತ್ತು. ಈ ಪ್ರಕರಣದ ತನಿಖೆ ವೇಳೆ ಬಾಗಲಕೋಟೆ ಡ್ರಗ್ಸ್ ಜಾಲದ ಮಾಹಿತಿ ಲಭಿಸಿತ್ತು.
ಇದರ ಆಧಾರದಲ್ಲಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, ಸುಮಾರು ₹5 ಕೋಟಿ ಮೌಲ್ಯದ 5 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದರು.
ಬಂಧಿತರಲ್ಲಿ ಬೆಳ್ತಂಗಡಿ ಮೂಲದ ಮಹಮ್ಮದ್ ಅಲ್ಫಾಜ್ ಮತ್ತು ಮಹಮ್ಮದ್ ಮುಸ್ತಾಫಾ ಸೇರಿದ್ದರು.
ತನಿಖೆ ವೇಳೆ ಬಂಧಿತರು ಸ್ಥಳೀಯ ಡ್ರಗ್ ಪೆಡ್ಲರ್ ಜಲೀಲ್ ಬಾಬಾಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದೆ.
ಅಲ್ಲದೆ, ಜಲೀಲ್ ತನ್ನ ಅಂಬ್ಯುಲೆನ್ಸ್ನ್ನೇ ಡ್ರಗ್ಸ್ ಸಾಗಾಟ ಮತ್ತು ಪೂರೈಕೆಗೆ ಬಳಸುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.
ಈ ಸಂಬಂಧ ಮಂಗಳೂರು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ವರದಿ ಸಲ್ಲಿಸಿದ್ದು, ಕಳೆದ ಎಂಟು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಜಲೀಲ್ ಬಾಬಾ ತಲೆಮರೆಸಿಕೊಂಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ.


