ಬೆಂಗಳೂರು ; ಕೌಟುಂಬಿಕ ವಿಚಾರವಾಗಿ ಭದ್ರಾವತಿ ತಾಲೂಕಿನ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಆ್ಯಸಿಡ್ ಎರಚಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮಹಿಳೆ ಶಿವಮೊಗ್ಗ ನಗರದ ಜಿಲ್ಲಾ ಮೆಕ್ಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ದೂರಿನ ಮೇರೆಗೆ ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಪ್ರತ್ಯೇಕವಾಗಿ ನೆಲೆಸಿದ್ದರು. ಮಹಿಳೆ ಬೆಂಗಳೂರಿನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಪುರುಷ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದ. ಅವರ ಮೂವರು ಮಕ್ಕಳು ಭದ್ರಾವತಿ ತಾಲೂಕಿನಲ್ಲಿ ಮಹಿಳೆಯ ಪೋಷಕರೊಂದಿಗೆ ವಾಸಿಸುತ್ತಿದ್ದರು.
ಸಂಕ್ರಾಂತಿಯಂದು ಮಹಿಳೆ ತನ್ನ ಮಕ್ಕಳನ್ನು ನೋಡಲು ಗ್ರಾಮಕ್ಕೆ ಬಂದಿದ್ದಾಗ, ಆಕೆಯ ಪೋಷಕರ ಮನೆಗೆ ಹೋಗಿ ಕೆಲಸ ಬಿಟ್ಟು ತನ್ನೊಂದಿಗೆ ಹೋಗುವಂತೆ ಹೇಳಿದ್ದಾನೆ.
ಇದರಿಂದ ದಂಪತಿ ನಡುವೆ ಮಾತಿನ ಚಕಮಕಿ ನಡೆದು ಆಕ್ರೋಶಗೊಂಡ ಪತಿ ಆ್ಯಸಿಡ್ ಡಬ್ಬಿ ತೆಗೆದುಕೊಂಡು ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ. ಆಕೆಯ ಮುಖ ಮತ್ತು ಕುತ್ತಿಗೆಗೆ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಆಕೆಯನ್ನು ಮೆಕ್ಯಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.