Saturday, July 18, 2026
Homeಜಿಲ್ಲೆಸುಳ್ಯ : ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕೇಂದ್ರದ ವೈಜ್ಞಾನಿಕ ಕ್ರಮ – ಸಂಸದ ಕ್ಯಾ....

ಸುಳ್ಯ : ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕೇಂದ್ರದ ವೈಜ್ಞಾನಿಕ ಕ್ರಮ – ಸಂಸದ ಕ್ಯಾ. ಬ್ರಿಜೇಶ್‌ ಚೌಟ ಪರಿಶೀಲನೆ.

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟುಮಾಡುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿದ್ದು, ಈ ಸಂಬಂಧ ಪ್ರಾಯೋಗಿಕ ತೋಟಗಳಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರ ಸರ್ಕಾರದ ಮಿಷನ್ ಫಾರ್ ಇಂಟೆಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್ ಯೋಜನೆಯಡಿ, ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI) ನೇತೃತ್ವದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಪ್ರದೇಶದಲ್ಲಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ವೈಜ್ಞಾನಿಕ ಪ್ರಾತ್ಯಕ್ಷಿಕೆಗಳನ್ನು ಅಳವಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಸದರು ಚನಿಲದ ಸುಬ್ರಹ್ಮಣ್ಯ ಪ್ರಸಾದ್ ಅವರ ತೋಟ ಸೇರಿದಂತೆ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಭೇಟಿ ನೀಡಿ, ಪೋಷಕಾಂಶ ಆಧಾರಿತ ಹಾಗೂ ವೈಜ್ಞಾನಿಕ ವಿಧಾನಗಳ ಮೂಲಕ ರೋಗ ನಿಯಂತ್ರಣದ ಕುರಿತು ನಡೆಯುತ್ತಿರುವ ಅಧ್ಯಯನದ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್‌ಚಂದ್ರ ಹಾಗೂ ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.

ಸುಮಾರು 6 ಎಕರೆ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಂಡಿದ್ದು, ಕಳೆದ ಜೂನ್‌ನಿಂದ ಅಡಿಕೆ ತೋಟಗಳಲ್ಲಿ ನಿಯಮಿತ ನಿಗಾ, ಮಾಹಿತಿ ಸಂಗ್ರಹ ಹಾಗೂ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಎಲೆಚುಕ್ಕಿ ರೋಗ ತಡೆಯಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕೃಷಿ ವಿಜ್ಞಾನಿಗಳು ರೈತರಿಗೆ ನಿರಂತರವಾಗಿ ಸಲಹೆ ನೀಡುತ್ತಿದ್ದಾರೆ.

ಸಂಸದ ಚೌಟ ಅವರು ಅಡಿಕೆ ಬೆಳೆಗಾರರನ್ನು ರಕ್ಷಿಸಲು ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಮಾರ್ಗಗಳನ್ನು ಅನುಷ್ಠಾನಗೊಳಿಸುವತ್ತ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ತಿಳಿದುಬಂದಿದೆ. ಅಟೋಮ್ಯಾಟಿಕ್ ವೆದರ್ ಸ್ಟೇಷನ್ ಅಳವಡಿಕೆ ಎಲೆಚುಕ್ಕಿ ರೋಗವು ಮಳೆ ಮತ್ತು ತೇವಾಂಶ ಹೆಚ್ಚಾದ ಸಂದರ್ಭದಲ್ಲಿ ವೇಗವಾಗಿ ಹರಡುವುದರಿಂದ, ಹವಾಮಾನ ಅಂಶಗಳ ಅಧ್ಯಯನಕ್ಕಾಗಿ ತೋಟದಲ್ಲಿ ಅಟೋಮ್ಯಾಟಿಕ್ ವೆದರ್ ಸ್ಟೇಷನ್ ಅಳವಡಿಸಲಾಗಿದೆ. ಇದರ ಮೂಲಕ ಮಳೆಯ ಪ್ರಮಾಣ, ತಾಪಮಾನ ಮತ್ತು ತೇವಾಂಶದ ಮಾಹಿತಿಯನ್ನು ಸಂಗ್ರಹಿಸಿ, ರೋಗದ ವ್ಯಾಪಕತೆಯೊಂದಿಗೆ ಸಂಬಂಧಿಸಿದ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ಹಾಗೂ ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular