ಬಂಟ್ವಾಳ : ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಯುವತಿ ಲಾವಣ್ಯ ಬರ್ಬರವಾಗಿ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದ ಆರೋಪಿ ಎಂದು ಗುರುತಿಸಲಾದ ಚೇತನ್, ಹತ್ಯೆ ನಡೆದ ಬಳಿಕ ಮೃತಳ ತಂದೆಗೆ ಕರೆ ಮಾಡಿ, “ಮಗಳನ್ನು ಕೊಂದಿದ್ದೇನೆ, ನಾನೂ ಸಾಯುತ್ತೇನೆ” ಎಂದು ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿಯಂತೆ, ಆರೋಪಿ ಚೇತನ್ ಆಲ್ಟೋ ಕಾರಿನಲ್ಲಿ ಮಂಗಳೂರು ಕಡೆಗೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಆತನ ಬಂಧನಕ್ಕಾಗಿ ದಕ್ಷಿಣ ಕನ್ನಡ ಪೊಲೀಸರು ವಿಶೇಷ ತಂಡ ರಚಿಸಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮೃತ ಲಾವಣ್ಯ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲಿ ಸುಮಾರು ತಿಂಗಳ ಹಿಂದೆ ಚೇತನ್ ಗಲಾಟೆ ನಡೆಸಿದ್ದ ಎನ್ನಲಾಗಿದೆ. ಇದೇ ವೇಳೆ ಲಾವಣ್ಯ ಮೇಲೆ ಹಲ್ಲೆಗೆ ಯತ್ನಿಸಿದ್ದಾಗ ಆಸ್ಪತ್ರೆ ಸಿಬ್ಬಂದಿ ತಡೆದಿದ್ದರು ಎಂಬ ಮಾಹಿತಿಯೂ ಹೊರಬಂದಿದೆ. ಆ ಸಂದರ್ಭದಲ್ಲಿ ಪೊಲೀಸ್ ದೂರು ದಾಖಲಾಗದೇ ಇರುವುದು ಈ ದುರ್ಘಟನೆಗೆ ಕಾರಣವಾಯಿತೇ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.
ಚೇತನ್ ಮತ್ತು ಲಾವಣ್ಯ ದೂರದ ಸಂಬಂಧಿಗಳಾಗಿದ್ದು, ಇಬ್ಬರ ನಡುವಿನ ಸಂಬಂಧದ ಬಗ್ಗೆ ಎರಡೂ ಕುಟುಂಬಗಳಿಗೆ ಮಾಹಿತಿ ಇತ್ತು ಎನ್ನಲಾಗಿದೆ. ಲಾವಣ್ಯ ಮೇಲಿನ ಅತಿಯಾದ ಒಲವಿನಿಂದ ಚೇತನ್ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಎಲ್ಲ ಮಾಹಿತಿಗಳನ್ನು ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.ಪ್ರಕರಣದ ಎಲ್ಲಾ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದ್ದು, ಆರೋಪಿಯನ್ನು ಶೀಘ್ರವೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.


