Thursday, November 26, 2026
Homeವಾಣಿಜ್ಯನವದೆಹಲಿ : ವಾಹನ ಸವಾರರಿಗೆ ಹೊಸ ನಿಯಮದ ಪ್ರಸ್ತಾವ: ಕಾರಿಗೆ 4 ವರ್ಷ, ಬೈಕಿಗೆ 6...

ನವದೆಹಲಿ : ವಾಹನ ಸವಾರರಿಗೆ ಹೊಸ ನಿಯಮದ ಪ್ರಸ್ತಾವ: ಕಾರಿಗೆ 4 ವರ್ಷ, ಬೈಕಿಗೆ 6 ವರ್ಷಗಳ ವಿಮೆ..!

ನವದೆಹಲಿ : ವಿಮೆ ಇಲ್ಲದೆ ವಾಹನಗಳು ರಸ್ತೆಗಿಳಿಯುವುದನ್ನು ತಡೆಯಲು ಕೇಂದ್ರ ಸರ್ಕಾರ ಹೊಸ ಕ್ರಮಗಳ ಬಗ್ಗೆ ಚಿಂತನೆ ನಡೆಸಿದೆ. ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಗಳನ್ನು ಪರಿಚಯಿಸುವ ಪ್ರಸ್ತಾವನೆ ಇದರಲ್ಲಿ ಪ್ರಮುಖವಾಗಿದೆ.

ಪ್ರಸ್ತಾವಿತ ಯೋಜನೆಯಡಿ ಈ ಅವಧಿಗೆ ಒಂದೇ ಬಾರಿಗೆ ವಿಮಾ ಪ್ರೀಮಿಯಂ ಪಾವತಿಸುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚರ್ಚೆ ನಡೆದಿದೆ. ಪ್ರಸ್ತುತ ಹೊಸ ವಾಹನ ಖರೀದಿಸುವಾಗ ನೀಡುವ ವಿಮೆಯ ಅವಧಿ ಮುಗಿದ ಬಳಿಕ ವಾಹನ ಮಾಲೀಕರು ಪ್ರತಿ ವರ್ಷ ವಿಮೆಯನ್ನು ನವೀಕರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಿಂದ ವಿಮೆ ನವೀಕರಣ ಮರೆತುಹೋಗುವ ಅಥವಾ ವಿಳಂಬವಾಗುವ ಸಾಧ್ಯತೆಯಿದ್ದು, ಅದನ್ನು ತಪ್ಪಿಸುವುದು ಹೊಸ ಕ್ರಮದ ಉದ್ದೇಶವಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದರೆ ವಿಮಾ ಪ್ರೀಮಿಯಂ ಹೆಚ್ಚಳ?

ವಾಹನಗಳ ವಿರುದ್ಧ ಹಿಂದಿನ ವರ್ಷ ದಾಖಲಾಗಿರುವ ನಿರ್ದಿಷ್ಟ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವವೂ ಇದೆ. ಇದರಿಂದ ಸಂಚಾರ ನಿಯಮ ಪಾಲನೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.

‘ವಿಮೆ ಇಲ್ಲದಿದ್ದರೆ ಇಂಧನವೂ ಇಲ್ಲ’ ಅಭಿಯಾನ

ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ನಿರ್ಬಂಧಿಸುವ ‘ನೋ ಇನ್ಶೂರೆನ್ಸ್, ನೋ ಫ್ಯೂಯೆಲ್’ ಅಭಿಯಾನಕ್ಕೂ ಚಿಂತನೆ ನಡೆದಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ರಸ್ತೆ ಸುರಕ್ಷತಾ ಸಮಿತಿಯು ಹರಿಯಾಣ ಮತ್ತು ಉತ್ತರ ಪ್ರದೇಶದ ತಲಾ ಐದು ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲು ಸೂಚಿಸಿದೆ.

ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳ ಮೂಲಕ ವಾಹನಗಳ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ, ವಿಮೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶವಿದೆ.

ವಾಹನ ವಿಮಾ ವ್ಯಾಪ್ತಿಯನ್ನು ಹೆಚ್ಚಿಸುವುದು, ವಿಮೆ ನವೀಕರಣದ ಸಮಸ್ಯೆ ನಿವಾರಿಸುವುದು ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವುದು ಈ ಪ್ರಸ್ತಾವಿತ ಕ್ರಮಗಳ ಪ್ರಮುಖ ಉದ್ದೇಶವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular