ಸುರತ್ಕಲ್ : ರಾತ್ರಿ ವೇಳೆ ಸರಿಯಾಗಿ ಗೋಚರಿಸದೆ ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದ ಸುರತ್ಕಲ್ ಪರಿಸರದ ಸುಮಾರು 12 ಹಂಪ್ಸ್ಗಳಿಗೆ ‘ಮೀಡಿಯಾ ಮನಸುಗಳು’ ಸಂಘಟನೆಯ ಯುವಪಡೆ ಬಿಳಿ ಬಣ್ಣ ಬಳಿದು ಗಮನ ಸೆಳೆಯುವಂತೆ ಮಾಡಿದೆ.





ಸುರತ್ಕಲ್ ಮಹಾನಗರ ಪಾಲಿಕೆ ಕಚೇರಿಯಿಂದ ಅಥರ್ವ ಆಸ್ಪತ್ರೆ ಮಾರ್ಗವಾಗಿ ತಡಂಬೈಲ್ ಮಾರಿಗುಡಿ ಸಂಪರ್ಕಿಸುವ ಸರ್ವಿಸ್ ರಸ್ತೆ, ಸೂರಜ್ ಹೋಟೆಲ್ ಮುಂಭಾಗ, ಸುರತ್ಕಲ್ ಬಸ್ ನಿಲ್ದಾಣ–ಗೋವಿಂದ ದಾಸ್ ಕಾಲೇಜು ರಸ್ತೆ ಹಾಗೂ ಪೋಸ್ಟ್ ಆಫೀಸ್–ಸುರತ್ಕಲ್ ಚರ್ಚ್ ಸಂಪರ್ಕಿಸುವ ಮಾರ್ಗಗಳಲ್ಲಿ ಬಣ್ಣವಿಲ್ಲದ ಹಂಪ್ಸ್ಗಳು ವಾಹನ ಸವಾರರಿಗೆ ಸಮಸ್ಯೆಯಾಗಿದ್ದವು. ರಾತ್ರಿ ವೇಳೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಹಂಪ್ಸ್ಗಳು ತಕ್ಷಣ ಗೋಚರಿಸದೆ ಅಪಘಾತದ ಅಪಾಯ ಎದುರಾಗುತ್ತಿತ್ತು.
ಮಧ್ಯರಾತ್ರಿ ಶ್ರಮದಾನ ಸಮಸ್ಯೆಯನ್ನು ಗಮನಿಸಿದ ‘ಮೀಡಿಯಾ ಮನಸುಗಳು’ ತಂಡದ ಸದಸ್ಯರು ಅಧಿಕಾರಿಗಳಿಗಾಗಿ ಕಾಯದೆ ಸ್ವಯಂಪ್ರೇರಿತರಾಗಿ ಕಾರ್ಯಾಚರಣೆಗೆ ಮುಂದಾದರು. ಭಾನುವಾರ ತಡರಾತ್ರಿ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾದ ಬಳಿಕ ಸುಮಾರು 12 ಹಂಪ್ಸ್ಗಳಿಗೆ ಬಿಳಿ ಬಣ್ಣ ಬಳಿದು, ರಾತ್ರಿ ವೇಳೆಯಲ್ಲೂ ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದರು.
ಈ ಸಮಾಜಮುಖಿ ಕಾರ್ಯಕ್ಕೆ ಕಾರ್ನಾಡ್ ರಚನಾ ಎಂಟರ್ಪ್ರೈಸಸ್ ಮಾಲಕರು ಅಗತ್ಯ ನೆರವು ನೀಡಿ ಬೆಂಬಲಿಸಿದರು. ಕಾರ್ಯಾಚರಣೆಯಲ್ಲಿ ‘ಮೀಡಿಯಾ ಮನಸುಗಳು’ ತಂಡದ ಮುಖಂಡರಾದ ಶಶಿ ಬೆಳ್ಳಾಯ, ಗಿರೀಶ್ ಮಣೇಲ್, ರಜನ್ ಕುಮಾರ್ ಕಾವೂರು, ಸಂದೇಶ್ ಶೆಟ್ಟಿ ಹಾಗೂ ಶಿವು ಕುಲಾಲ್ ಭಾಗವಹಿಸಿದ್ದರು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡ ಈ ಸ್ವಯಂಪ್ರೇರಿತ ಶ್ರಮದಾನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

