ಬೆಂಗಳೂರು : ಜಾರಿ ನಿರ್ದೇಶನಾಲಯದ (ED) ಬೆಂಗಳೂರು ವಲಯ ಕಚೇರಿ ವತಿಯಿಂದ ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳ ಮೇಲೆ 2026ರ ಸೆಪ್ಟೆಂಬರ್ 9 ಮತ್ತು 10ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು, ಬೆಳಗಾವಿ, ಗೋಕಾಕ್ ಹಾಗೂ ಕೋಲ್ಕತ್ತಾದಲ್ಲಿ ಒಟ್ಟು 4 ಸ್ಥಳಗಳಲ್ಲಿ ಈ ಶೋಧ ನಡೆಸಲಾಗಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ನಡೆದ ಈ ಕಾರ್ಯಾಚರಣೆಯ ಉದ್ದೇಶ ಜಾರಕಿಹೊಳಿ ಕುಟುಂಬದ ಬಹಿರಂಗಪಡಿಸದ ವಿದೇಶಿ ಹೂಡಿಕೆಗಳು, ಗಡಿ ದಾಟಿದ ವ್ಯವಹಾರ ಸಂಬಂಧಗಳು ಹಾಗೂ ಶಂಕಿತ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ಮಾಹಿತಿ ಸಂಗ್ರಹಿಸುವುದಾಗಿದೆ ಎಂದು ಇ.ಡಿ. ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಚಿಕ್ಕೋಡಿ ಸಂಸದೆ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಭಾವ ವೈ.ಡಿ. ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನೂ ಪರಿಶೀಲಿಸಲಾಯಿತು. ಇದರ ಜೊತೆಗೆ ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಚರರಾದ ಒಎಸ್ಡಿ ಹಾಗೂ ವೈಯಕ್ತಿಕ ಸಹಾಯಕ ಮಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ ಪ್ರಸನ್ನವರ ಹಾಗೂ ಡಾ. ಗಿರೀಶ್ ಸೋನವಾಲ್ಕರ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಶೋಧ ನಡೆಸಲಾಗಿದೆ.
ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ (BVEPL) ಎಂಬ ಖಾಸಗಿ ಕಂಪನಿಯ ಅಧಿಕಾರಿಗಳು ಹಾಗೂ ಮಾಲೀಕರ ಕಚೇರಿ ಮತ್ತು ನಿವಾಸಗಳ ಮೇಲೂ ಶೋಧ ನಡೆದಿದೆ. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯಲು ಕಂಪನಿಯು ಭಾರೀ ಮೊತ್ತದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇ.ಡಿ. ಹೇಳಿದೆ.
ಇ.ಡಿ. ಪ್ರಕಾರ, ಜಾರಕಿಹೊಳಿ ಕುಟುಂಬದ ಸದಸ್ಯರಾದ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಆಫ್ರಿಕಾದ ವಿವಿಧ ವಿದೇಶಿ ಕಂಪನಿಗಳಲ್ಲಿ ಷೇರು ಪಾಲುದಾರಿಕೆಯನ್ನು ಹೊಂದಿರುವುದು ಪತ್ತೆಯಾಗಿದೆ.
ಅವುಗಳಲ್ಲಿ ಕಾಂಗೋದ ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ (Eldorado Mining Resources) ಹಾಗೂ ಜಾಂಬಿಯಾದ ನವಾ ಔರಮ್ ಮೈನಿಂಗ್ ಲಿಮಿಟೆಡ್ (Nava Aurum Mining Ltd) ಸೇರಿದಂತೆ ಹಲವು ಸಂಸ್ಥೆಗಳು ಸೇರಿವೆ ಎಂದು ಇ.ಡಿ. ತಿಳಿಸಿದೆ.
ಅದೇ ರೀತಿ, ಕಾಂಗೋದಲ್ಲಿರುವ ಚಿನ್ನದ ಗಣಿಗಾರಿಕೆ ಸಂಸ್ಥೆ Magnitude Star SARLನಲ್ಲಿ ಸತೀಶ್ ಜಾರಕಿಹೊಳಿ ಅವರು ಸುಮಾರು ಶೇ.40ರಷ್ಟು ಪಾಲನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಆಫ್ರಿಕಾದಲ್ಲಿ ಗಣಿಗಾರಿಕೆ ಆಸ್ತಿಗಳನ್ನು ಹೊಂದಿರುವ ಇನ್ನೂ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 9 ಮತ್ತು 10ರಂದು ಏಕಕಾಲದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಗೋಕಾಕ್ನಲ್ಲಿರುವ ಸಚಿವರ ನಿವಾಸ, ಬೆಂಗಳೂರಿನ ಡಾಲರ್ಸ್ ಕಾಲೊನಿಯ ನಿವಾಸ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ-ಸಹ-ನಿವಾಸ ಸೇರಿದಂತೆ ಬೆಂಗಳೂರು, ಗೋಕಾಕ್ ಮತ್ತು ಬೆಳಗಾವಿಯ ವಿವಿಧ ಸ್ಥಳಗಳನ್ನು ಪರಿಶೀಲಿಸಲಾಯಿತು.ಶೋಧದ ವೇಳೆ FEMA ಉಲ್ಲಂಘನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿವೆ ಎಂದು ಇ.ಡಿ. ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಲೆಕ್ಕಕ್ಕೆ ಬಾರದ ₹3.3 ಕೋಟಿ ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ ಅಮೆರಿಕನ್ ಡಾಲರ್, ಯುರೋ ಸೇರಿದಂತೆ ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಕಾಂಗೋದಲ್ಲಿನ ಒಂದು ಸಂಸ್ಥೆಯಲ್ಲಿ ಅನಧಿಕೃತ ಮಾರ್ಗದ ಮೂಲಕ ಭಾರೀ ಪ್ರಮಾಣದ ಹಣವನ್ನು ನಗದು ರೂಪದಲ್ಲಿ ಹೂಡಿಕೆ/ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಶೋಧದ ವೇಳೆ ದೊರೆತಿವೆ ಎಂದು ಇ.ಡಿ. ಹೇಳಿದೆ.
ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳೂ ಪತ್ತೆಯಾಗಿವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. BVEPL ಸೇರಿದಂತೆ ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಇತರ ಆಕ್ಷೇಪಾರ್ಹ ದಾಖಲೆಗಳು ವಿವಿಧ ಪ್ರಭಾವಿ ವ್ಯಕ್ತಿಗಳ ಸಂಸ್ಥೆಗಳು ಮತ್ತು ಖಾತೆಗಳಿಂದ ಪತ್ತೆಯಾಗಿವೆ.
ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ. ಮಂಜುನಾಥ್ ನಿಯಂತ್ರಿಸಿ ನಿರ್ವಹಿಸುತ್ತಿರುವ ಸಂಸ್ಥೆಗೆ ಸಂಬಂಧಿಸಿದ ಖಾತೆಗಳಲ್ಲಿಯೂ ಇಂತಹ ದಾಖಲೆಗಳು ಮತ್ತು ಮಾಹಿತಿಗಳು ಪತ್ತೆಯಾಗಿವೆ ಎಂದು ಇ.ಡಿ. ತಿಳಿಸಿದೆ.


