ಮೈಸೂರು : ಕುಡಿದ ಮತ್ತಿನಲ್ಲಿ ಉದ್ಯಾನವನದ ಬೇಲಿ ಹಾರಲು ಮುಂದಾದ ವ್ಯಕ್ತಿಯೊಬ್ಬರಿಗೆ ಮೊನಚಾದ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮೈಸೂರಿನ ನಜರಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ರಾಜೀವ್ ನಗರದ ನಿವಾಸಿ ರವಿ (38) ಎಂದು ಗುರುತಿಸಲಾಗಿದೆ. ಮೈಸೂರು ಮೃಗಾಲಯದ ಬಳಿ ಕಬ್ಬಿನಹಾಲು ವ್ಯಾಪಾರ ಮಾಡುತ್ತಿದ್ದ ರವಿ, ಕಳೆದ ಒಂದು ತಿಂಗಳಿಂದ ಕುಡಿತದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಮಧ್ಯರಾತ್ರಿ ಮನೆ ಬಿಟ್ಟಿದ್ದ ರವಿ, ಕುಡಿದ ಮತ್ತಿನಲ್ಲಿ ಉದ್ಯಾನವನದ ಬೇಲಿ ಹಾರಲು ಮುಂದಾಗಿದ್ದಾರೆ. ಈ ವೇಳೆ ಬೇಲಿಯಲ್ಲಿದ್ದ ಮೊನಚಾದ ಕಬ್ಬಿಣದ ರಾಡ್ ತೊಡೆ ಭಾಗಕ್ಕೆ ಚುಚ್ಚಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ ದಾರಿಹೋಕರು ಮೃತದೇಹವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ನಜರಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

