ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಸಿ.ಟಿ. ರವಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಅವರ ನಿವಾಸಕ್ಕೆ ಭೇಟಿ ನೀಡಿ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಲು ಯತ್ನಿಸಿದರು. ಆದರೆ, ಎಫ್ಐಆರ್ ಪ್ರತಿಯನ್ನು ಮೊದಲು ನೀಡುವಂತೆ ಒತ್ತಾಯಿಸಿದ ಸಿ.ಟಿ. ರವಿ ನೋಟಿಸ್ ಸ್ವೀಕರಿಸಲು ನಿರಾಕರಿಸಿದರು.
ಪೊಲೀಸರೊಂದಿಗೆ ಮಾತನಾಡಿದ ಸಿ.ಟಿ. ರವಿ, “ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದೀರಿ? ಎಫ್ಐಆರ್ನಲ್ಲಿ ದ್ವೇಷ ಭಾಷಣದ ಅಂಶ ಎಲ್ಲಿದೆ? ನಾನು ಬೆಂಕಿ ಹಚ್ಚಲು ಬಂದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇನೆ. ‘ಮುಲ್ಲಾ’ ಎಂದರೆ ಮುಸ್ಲಿಂ ಸಮುದಾಯ ಎಂದರ್ಥವೇ?” ಎಂದು ಪ್ರಶ್ನಿಸಿದರು.
ಇದೇ ವೇಳೆ, “ದೂರು ಬಂದ ತಕ್ಷಣ ಎಫ್ಐಆರ್ ದಾಖಲಿಸುತ್ತೀರಾ? ಭಾಷಣದಲ್ಲಿ ಧರ್ಮದ ಬಗ್ಗೆ ಒಂದೇ ಒಂದು ಪದ ಇದೆಯೇ? ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸಬೇಡಿ” ಎಂದು ಪೊಲೀಸರ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದರು.
ಸಿ.ಟಿ. ರವಿ ನಿವಾಸದಲ್ಲಿ ಇಬ್ಬರು ವಕೀಲರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದ್ದು, ಪೊಲೀಸರ ಕ್ರಮವನ್ನು ಪ್ರಶ್ನಿಸಿದರು. “ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಾವು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿದ್ದೀರಾ?” ಎಂದು ಬಿಜೆಪಿ ಕಾರ್ಯಕರ್ತರು ಪೊಲೀಸರನ್ನು ಪ್ರಶ್ನಿಸಿದರು.
ಇದಾದ ಬಳಿಕ ನಗರ ಠಾಣೆಯ ಇನ್ಸ್ಪೆಕ್ಟರ್ ಹಾಗೂ ತನಿಖಾಧಿಕಾರಿ ಅಭಯ್ ಪ್ರಕಾಶ್ ನೋಟಿಸ್ ನೀಡಲು ಮುಂದಾದರೂ, ಸಿ.ಟಿ. ರವಿ ನೋಟಿಸ್ ಸ್ವೀಕರಿಸಲಿಲ್ಲ. ನಂತರ ಪೊಲೀಸರು ಮನೆಯ ಮುಂಭಾಗ ನೋಟಿಸ್ ಅಂಟಿಸಿ ವಾಪಸ್ಸಾದರು. ಆದರೆ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಆ ನೋಟಿಸ್ ಅನ್ನು ತೆರವುಗೊಳಿಸಿ, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


