Monday, July 27, 2026
Homeರಾಜ್ಯಚಿಕ್ಕಮಗಳೂರು : ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು ; ಶವ...

ಚಿಕ್ಕಮಗಳೂರು : ಕಾಡುಹಂದಿ ಬೇಟೆಗೆ ಹಾಕಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು ; ಶವ ಹೂತು ಹಾಕಿದ್ದ ಮೂವರು ಬಂಧನ.

ಚಿಕ್ಕಮಗಳೂರು : ಕಾಡುಹಂದಿ ಬೇಟೆಗಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಮೃತದೇಹವನ್ನು ಯಾರಿಗೂ ತಿಳಿಯದಂತೆ ಹೂತು ಹಾಕಿದ್ದ ಆರೋಪದಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೃತರನ್ನು ಕರಿಯಪ್ಪ (52) ಎಂದು ಗುರುತಿಸಲಾಗಿದೆ. ಕರಿಯಪ್ಪ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಈ ವೇಳೆ ಜಮೀನಿನ ಬಳಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕರಿಯಪ್ಪ ಆ ಮಾರ್ಗದಲ್ಲಿ ತೆರಳಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಕೆಲವೇ ಗಂಟೆಗಳ ಬಳಿಕ ಅದೇ ಮಾರ್ಗದಲ್ಲಿ ಮತ್ತೋರ್ವ ವ್ಯಕ್ತಿ ಓಡಾಡುತ್ತಿರುವ ದೃಶ್ಯವೂ ಸೆರೆಯಾಗಿತ್ತು. ಈ ಸುಳಿವಿನ ಆಧಾರದಲ್ಲಿ ಪೊಲೀಸರು ಸಂಬಂಧಪಟ್ಟ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ, ಕಾಡುಹಂದಿ ಬೇಟೆಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕರಿಯಪ್ಪ ಮೃತಪಟ್ಟಿದ್ದು, ಬಳಿಕ ಪ್ರಕರಣ ಮುಚ್ಚಿಹಾಕುವ ಉದ್ದೇಶದಿಂದ ಶವವನ್ನು ರಹಸ್ಯವಾಗಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಗಟಿ ಪೊಲೀಸರು ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೂತು ಹಾಕಿರುವ ಮೃತದೇಹವನ್ನು ಇಂದು ತರೀಕೆರೆ ಉಪವಿಭಾಗಾಧಿಕಾರಿ (ಎಸಿ) ಅವರ ಸಮ್ಮುಖದಲ್ಲಿ ಹೊರತೆಗೆದು ಮಹಜರು ನಡೆಸಲಾಗುತ್ತಿದೆ. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular