ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಲಿದ್ದು, ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಿರುವ ವಿವೇಕ ಸ್ಮಾರಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.55ಕ್ಕೆ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ, ಅಲ್ಲಿಂದ 3.15ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ನಗರದ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.bನಂತರ 3.25ಕ್ಕೆ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ಭೇಟಿ ನೀಡಿ, 3.30ರಿಂದ 5.15ರವರೆಗೆ ರಾಮಕೃಷ್ಣ ಆಶ್ರಮದಲ್ಲಿ ನಡೆಯುವ ಉದ್ಘಾಟನಾ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬಳಿಕ 5.20ಕ್ಕೆ ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿರುವ ಪ್ರಧಾನಿ, 5.30ಕ್ಕೆ ಓವಲ್ ಮೈದಾನದಿಂದ ಮೈಸೂರು ವಿಮಾನ ನಿಲ್ದಾಣದತ್ತ ತೆರಳಲಿದ್ದಾರೆ. ಸಂಜೆ 5.55ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಹಾಗೂ ಸಂಚಾರ ಮಾರ್ಗಗಳಲ್ಲಿ ಅಗತ್ಯ ಬದಲಾವಣೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.


