ಮಂಗಳೂರು : ವೈಭವೀಕರಣವಿಲ್ಲದ ನೈಜ ಸುದ್ದಿಗಳ ಪ್ರಕಟಣೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೂರಕವಾಗಿದ್ದು, ಪತ್ರಕರ್ತರು ವಸ್ತುನಿಷ್ಠ ಹಾಗೂ ಪಾರದರ್ಶಕ ವರದಿಗಾರಿಕೆಗೆ ಆದ್ಯತೆ ನೀಡಬೇಕು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.



ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಳಿತ ವ್ಯವಸ್ಥೆ ಮತ್ತು ಮಾಧ್ಯಮ ಒಂದೇ ಹಾದಿಯಲ್ಲಿ ಸಾಗುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಹಿಂದೆ ಒಂದೇ ಘಟನೆಯನ್ನು ವೈಭವೀಕರಿಸಿ ವಿವಿಧ ರೀತಿಯಲ್ಲಿ ವರದಿ ಮಾಡಲಾಗುತ್ತಿತ್ತು. ಆದರೆ ಇಂದು ಫ್ಯಾಕ್ಟ್ ಚೆಕ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಪಾರದರ್ಶಕ ವರದಿಗಾರಿಕೆ ಅತ್ಯಗತ್ಯ. ಕೋಮು ಸೌಹಾರ್ದ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದ್ದು, ಸೂಕ್ಷ್ಮ ಸಂದರ್ಭಗಳಲ್ಲಿ ಜವಾಬ್ದಾರಿಯುತ ವರದಿಗಾರಿಕೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅರಣ್ಯ ಸಂರಕ್ಷಣಾಕಾರಿ ಡಾ. ವಿ. ಕರಿಕಾಲನ್, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಜತೆಗೆ ಪ್ರಜಾಪ್ರಭುತ್ವವನ್ನು ಬಲಪಡಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಕರಾವಳಿಯ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸಾರ್ವಜನಿಕ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
ಪತ್ರಿಕಾ ದಿನದ ವಿಶೇಷ ಉಪನ್ಯಾಸ ನೀಡಿದ ನ್ಯೂಸ್-18 ಪ್ರಧಾನ ಸಂಪಾದಕ ಹರಿಪ್ರಸಾದ್ ಅಡ್ಪಂಗಾಯ, ಡಿಜಿಟಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಸುಳ್ಳು ಸುದ್ದಿಗಳ ಪ್ರಸಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದು ಹೇಳಿದರು. ಜಾತಿ, ಧರ್ಮ ಆಧಾರಿತ ವೈಭವೀಕರಣದಿಂದ ದೂರವಿದ್ದು, ನಿಷ್ಪಕ್ಷಪಾತ ಹಾಗೂ ಪಾರದರ್ಶಕ ವರದಿಗಾರಿಕೆಗೆ ಆದ್ಯತೆ ನೀಡಬೇಕು. ಪತ್ರಿಕೋದ್ಯಮವು ಸಮಾಜದ ಕನ್ನಡಿಯಾಗಿದ್ದು, ಅದರ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ ಎಂದು ಅವರು ತಿಳಿಸಿದರು.
1843ರ ಜುಲೈ 1ರಂದು ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭಿಸಿದ ಐತಿಹಾಸಿಕ ದಿನದ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ಹಿರಿಯ ಪತ್ರಿಕಾ ವಿತರಕ ತಿಮ್ಮಪ್ಪ ಶೆಟ್ಟಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವೂ ಪ್ರದಾನಿಸಲಾಯಿತು.
ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿಜಯ ಕೋಟ್ಯಾನ್ ಪಡು ಪ್ರತಿಭಾ ಪುರಸ್ಕಾರದ ವಿವರಗಳನ್ನು ನೀಡಿದರೆ, ಉಪಾಧ್ಯಕ್ಷ ಆರಿಫ್ ಪಡುಬಿದ್ರೆ ಕಾರ್ಯಕ್ರಮ ನಿರೂಪಿಸಿದರು.


