ಮಂಗಳೂರು : ಕರಾವಳಿಯಲ್ಲಿ ಸುರಿದ ಭಾರೀ ಮಳೆಯ ಅಬ್ಬರಕ್ಕೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಹಿಂಭಾಗದ ನಾಗುರಿಯಲ್ಲಿ ಭೀಕರ ದುರಂತ ಸಂಭವಿಸಿದೆ.
ತಡೆಗೋಡೆ ಕುಸಿದು ವಸತಿ ಮನೆಯ ಮೇಲೆ ಬಿದ್ದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಘಡ ಸಂಭವಿಸಿದ ವೇಳೆ ಮನೆಯೊಳಗೆ ಒಟ್ಟು ಆರು ಮಂದಿ ಇದ್ದರು. ಸ್ಥಳೀಯರು, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮೂವರನ್ನು ಜೀವಂತವಾಗಿ ಹೊರತೆಗೆದರು. ಆದರೆ ಮಹಿಳೆ ಹಾಗೂ ಇಬ್ಬರು ಬಾಲಕಿಯರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ದುರಂತದ ಬಳಿಕ ಜಿಲ್ಲಾಧಿಕಾರಿ ದರ್ಶನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿರಂತರ ಮಳೆಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸುವ ಆತಂಕ ಇರುವುದರಿಂದ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ. ಪ್ರಾಥಮಿಕ ಪರಿಶೀಲನೆಯಲ್ಲಿ ಕಾಂಪೌಂಡ್ ಗೋಡೆ ಕುಸಿದು ಮನೆಯ ಮೇಲೆ ಬಿದ್ದಿರುವುದು ಹಾಗೂ ಮನೆಯ ಹಿಂಭಾಗಕ್ಕೂ ಹಾನಿಯಾಗಿರುವುದು ಕಂಡುಬಂದಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸುವಾಗ ಸಮರ್ಪಕ ಅಡಿಪಾಯ ಹಾಗೂ ಮಳೆನೀರು ಹರಿಸುವ ವೈಜ್ಞಾನಿಕ ವ್ಯವಸ್ಥೆ ಕಡ್ಡಾಯವಾಗಿದ್ದು, ಈ ನಿಯಮಗಳ ಪಾಲನೆ ಅತ್ಯಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, ಗೋಡೆ ಕುಸಿತಕ್ಕೆ ನಿಖರ ಕಾರಣ ತಿಳಿಯಲು ತಾಂತ್ರಿಕ ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತಿದೆ. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಳಪೆ ಕಾಮಗಾರಿ ಅಥವಾ ಅನಧಿಕೃತ ಭೂ ಅಗೆತದಿಂದ ದುರಂತ ಸಂಭವಿಸಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದು, ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದೆ. ಈ ದುರಂತವು ಗುಡ್ಡಗಾಡು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣದ ಗುಣಮಟ್ಟ, ಸುರಕ್ಷತಾ ಮಾನದಂಡಗಳ ಪಾಲನೆ ಹಾಗೂ ಅನಧಿಕೃತ ಕಾಮಗಾರಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ತಾಂತ್ರಿಕ ತನಿಖೆಯ ವರದಿಯತ್ತ ಎಲ್ಲರ ಚಿತ್ತ ನೆಟ್ಟಿದೆ.



