Saturday, August 15, 2026
Homeಜಿಲ್ಲೆಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಅದ್ದೂರಿ ಹಾಗೂ ಸಂಭ್ರಮದ 80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

ಮಂಗಳೂರು : ಕರಾವಳಿ ನಗರಿ ಮಂಗಳೂರಿನಲ್ಲಿ ಅದ್ದೂರಿ ಹಾಗೂ ಸಂಭ್ರಮದ 80 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

ಮಂಗಳೂರು : ದೇಶದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರಾವಳಿ ನಗರಿ ಮಂಗಳೂರಿನಲ್ಲಿ ಅದ್ದೂರಿ ಹಾಗೂ ಸಂಭ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ ಜಿಲ್ಲಾಡಳಿತ ವತಿಯಿಂದ ನಗರದ ನೆಹರು ಮೈದಾನದಲ್ಲಿ ಆಚರಿಸಲಾಯಿತು.

ನಗರದ ವಿವಿಧೆಡೆ ಧ್ವಜಾರೋಹಣ, ದೇಶಭಕ್ತಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಮೆರುಗು ದೊರೆಯಿತು.

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಗೀತೆಗಳು, ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದ ಸಾರ್ವಜನಿಕರು, ದೇಶದ ಏಕತೆ, ಸೌಹಾರ್ದತೆ ಹಾಗೂ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸುವ ಸಂಕಲ್ಪ ಮಾಡಿದರು.

ನಗರದೆಲ್ಲೆಡೆ ತ್ರಿವರ್ಣ ಧ್ವಜಗಳು ರಾರಾಜಿಸಿದ್ದು, ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಸಚಿವ ಜಮೀರ್ ಅಹ್ಮದ್ ಗೈರಾಗಿರುವ ವಿಚಾರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ ಅವರ ದೇಶಪ್ರೇಮದ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, “ಜಮೀರ್ ಅಹ್ಮದ್ ಅವರ ದೇಶಪ್ರೇಮ ಬೇರೆಯವರಿಗಿಂತ ಹೆಚ್ಚಿದೆ. ದೇಶದ ಸತ್ಪ್ರಜೆಯಾಗಿ ಅವರು ಸೌಹಾರ್ದತೆ ಹಾಗೂ ದೇಶಪ್ರೇಮವನ್ನು ತೋರಿಸಿದ್ದಾರೆ” ಎಂದರು.

ಕೆಲವು ಕಾರಣಗಳಿಂದಾಗಿ ಇಂದಿನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಜಮೀರ್ ಅಹ್ಮದ್ ಕೊನೆಯ ಕ್ಷಣದಲ್ಲಿ ಪತ್ರ ಬರೆದಿದ್ದಾರೆ. ಪತ್ರದಲ್ಲಿನ ಒಂದೆರಡು ಅಕ್ಷರಗಳ ವ್ಯತ್ಯಾಸವನ್ನು ಹಿಡಿದುಕೊಂಡು ಅವರ ಉದ್ದೇಶವನ್ನು ಅಪಾರ್ಥ ಮಾಡಿಕೊಳ್ಳುವುದು ಸರಿಯಲ್ಲ. ಅವರ ಉದ್ದೇಶ ಸರಿಯಿದೆ, ಅದನ್ನು ಅರ್ಥಮಾಡಿಕೊಳ್ಳಬೇಕು. ಈ ವಿಚಾರವನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ ಎಂದು ಖಾದರ್ ಹೇಳಿದರು.

ಜಮೀರ್‌ಗೆ ಖಾತೆ ಬಗ್ಗೆ ಅಸಮಾಧಾನವಿಲ್ಲ ಜಮೀರ್ ಅಹ್ಮದ್ ಅವರಿಗೆ ಖಾತೆ ಹಂಚಿಕೆ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟಪಡಿಸಿದ ಖಾದರ್, ಹೈಕಮಾಂಡ್ ನೀಡಿರುವ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಂಡೇ ಈ ತೀರ್ಮಾನ ಕೈಗೊಂಡಿದ್ದಾರೆ. ಜಮೀರ್ ಅವರೂ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.

“ದೇಶದ ಎಲ್ಲರಿಗೂ ದೇಶಪ್ರೇಮ ಇದೆ. ಜಮೀರ್ ಅಹ್ಮದ್ ಅವರಿಗೂ ದೇಶಪ್ರೇಮ ಇದೆ. ಎಲ್ಲರೂ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟಿನಿಂದ ಅಭಿವೃದ್ಧಿಯ ಕರ್ನಾಟಕ ನಿರ್ಮಿಸೋಣ” ಎಂದು ಕರೆ ನೀಡಿದರು.

ಗುಟ್ಕಾ ನಿಷೇಧದ ಬಗ್ಗೆ ಸ್ಪಷ್ಟನೆ : ರಾಜ್ಯದಲ್ಲಿ ಗುಟ್ಕಾ ನಿಷೇಧದ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ನಿಕೋಟಿನ್ ಮತ್ತು ತಂಬಾಕು ಮಿಶ್ರಿತ ಗುಟ್ಕಾವನ್ನು ನಿಷೇಧಿಸಲಾಗಿದೆ. ಆದರೆ ಪ್ರತ್ಯೇಕವಾಗಿ ಪಾನ್ ಮಸಾಲಾ ಮಾತ್ರ ಮಾರಾಟವಾಗುವುದಕ್ಕೆ ಸರ್ಕಾರದ ನಿರ್ಬಂಧವಿಲ್ಲ ಎಂದು ತಿಳಿಸಿದರು.

ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಸ್ಥರಿಗೆ ತೊಂದರೆ ಆಗುವುದಿಲ್ಲ. 2014ರಲ್ಲಿಯೂ ಗುಟ್ಕಾ ನಿಷೇಧಿಸಲಾಗಿತ್ತು. ಆಗಲೂ ಅಡಿಕೆ ಬೆಲೆ ಕಡಿಮೆಯಾಗದೆ ಹೆಚ್ಚಾಗಿತ್ತು. ಈಗಲೂ ಮೂರು ತಿಂಗಳು ಕಾಯಬೇಕು, ಬಳಿಕ ಪರಿಸ್ಥಿತಿ ಕುರಿತು ಮಾತನಾಡಬಹುದು ಎಂದರು.

“ಇದು ರಾಜಕೀಯ ಉದ್ದೇಶದಿಂದ ಕೈಗೊಂಡ ಕ್ರಮವಲ್ಲ. ಸಾರ್ವಜನಿಕ ಆರೋಗ್ಯಕ್ಕೆ ಪೂರಕವಾಗಿರುವ ಉದ್ದೇಶದಿಂದ ಗುಟ್ಕಾ ನಿಷೇಧಿಸಲಾಗಿದೆ” ಎಂದು ಖಾದರ್ ಹೇಳಿದರು.

ಧಾರ್ಮಿಕ ಚಟುವಟಿಕೆ ನಿರ್ಬಂಧ ಕಾಯಿದೆ : ಚರ್ಚಿಸಿ ನಿರ್ಧಾರ.

ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸುವ ಕಾಯಿದೆ ವಿಚಾರವಾಗಿ ಮಾತನಾಡಿದ ಖಾದರ್, ಸಂವಿಧಾನ ಮತ್ತು ಕಾನೂನಿಗೆ ಅನುಗುಣವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.ಕಾಂಗ್ರೆಸ್ ಸರ್ಕಾರ ಈ ಕುರಿತು ಚರ್ಚಿಸಿ ನಿರ್ಧಾರ ಮಾಡಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಪ್ರತಿಪಕ್ಷ ನಾಯಕರೊಂದಿಗೂ ಚರ್ಚಿಸಲಾಗುವುದು. ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಉಂಟುಮಾಡುವ ಅಥವಾ ಸಂವಿಧಾನ ವಿರೋಧಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular