ನವದೆಹಲಿ : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ತಲಾ ₹3 ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಹೊಸ ದರ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ₹100ರ ಗಡಿಗೆ ತಲುಪಿದ್ದು, ಡೀಸೆಲ್ ದರವೂ ಗಣನೀಯ ಏರಿಕೆ ಕಂಡಿದೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಕಚ್ಚಾ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಕೆಲವು ಸಮಯದಿಂದ ಸ್ಥಿರವಾಗಿದ್ದ ಇಂಧನ ದರ ಏಕಾಏಕಿ ಏರಿಕೆಯಾಗಿರುವುದು ಸಾರ್ವಜನಿಕರ ಮೇಲೆ ಹೆಚ್ಚುವರಿ ಹೊರೆ ತಂದಿದೆ. ಸಾರಿಗೆ ವೆಚ್ಚ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ವ್ಯಕ್ತವಾಗಿದೆ.
ತೈಲ ಕಂಪನಿಗಳು ಅನುಭವಿಸುತ್ತಿರುವ ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂದು ಮೂಲಗಳು ತಿಳಿಸಿವೆ.


