Friday, May 8, 2026
Flats for sale
Homeದೇಶಕೋಲ್ಕತ್ತಾ ; ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಭೂಕಂಪ : ರಾಜ್ಯಪಾಲ ಆರ್.ಎನ್ ರವಿಯವರಿಂದ ವಿಧಾನಸಭೆ ವಿಸರ್ಜನೆ.

ಕೋಲ್ಕತ್ತಾ ; ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಭೂಕಂಪ : ರಾಜ್ಯಪಾಲ ಆರ್.ಎನ್ ರವಿಯವರಿಂದ ವಿಧಾನಸಭೆ ವಿಸರ್ಜನೆ.

ಕೋಲ್ಕತ್ತಾ : ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಅತಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದ್ದು, ರಾಜ್ಯಪಾಲ ಆರ್.ಎನ್. ರವಿ ಅವರು ಗುರುವಾರ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ. ಚುನಾವಣಾ ಸೋಲಿನ ಹೊರತಾಗಿಯೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ರಾಜೀನಾಮೆ ನೀಡಲು ಸಾರಾಸಗಟಾಗಿ ನಿರಾಕರಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ಸೋಲನ್ನು ಒಪ್ಪದ ಮಮತಾ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತೃಣಮೂಲ ಕಾಂಗ್ರೆಸ್‌ನ (TMC) 15 ವರ್ಷಗಳ ಸುದೀರ್ಘ ಆಡಳಿತಕ್ಕೆ ತೆರೆ ಬಿದ್ದಿದೆ. ಕೇವಲ 80 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಟಿಎಂಸಿ ಹೀನಾಯ ಸೋಲು ಕಂಡಿದ್ದರೂ, ಮಮತಾ ಬ್ಯಾನರ್ಜಿ ಮಾತ್ರ ಇದು ಜನಾದೇಶವಲ್ಲ, ಬದಲಾಗಿ ಒಂದು ಪಿತೂರಿ ಎಂದು ಆರೋಪಿಸಿದ್ದಾರೆ.

ರಾಜಭವನಕ್ಕೆ ಹೋಗಲ್ಲ ಎಂದು ಪಟ್ಟು ಮೊನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ನಾನು ಯಾಕೆ ರಾಜೀನಾಮೆ ನೀಡಬೇಕು? ನಾವು ಸೋತಿಲ್ಲ, ಜನಾದೇಶವನ್ನು ಲೂಟಿ ಮಾಡಲಾಗಿದೆ. ನೂರು ಸೀಟುಗಳನ್ನು ಸಂಚಿನ ಮೂಲಕ ಕಿತ್ತುಕೊಳ್ಳಲಾಗಿದೆ. ಮತ ಎಣಿಕೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ನಾನು ಸೋಲನ್ನು ಒಪ್ಪಲ್ಲ ಮತ್ತು ರಾಜಭವನಕ್ಕೂ ಹೋಗುವುದಿಲ್ಲ ಎಂದು ಗುಡುಗಿದ್ದರು. ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷ ಹೋರಾಡುತ್ತಿರುವುದು ಬಿಜೆಪಿಯ ವಿರುದ್ಧವಲ್ಲ, ಚುನಾವಣಾ ಆಯೋಗದ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯಪಾಲರ ಐತಿಹಾಸಿಕ ಕ್ರಮ ಮುಖ್ಯಮಂತ್ರಿಗಳು ಅಧಿಕಾರ ತ್ಯಜಿಸಲು ನಿರಾಕರಿಸಿದ ಕಾರಣ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ತಲೆದೂರಿತ್ತು. ಹಾಲಿ ಸರ್ಕಾರದ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಹಾಗೂ ಚುನಾವಣಾ ಫಲಿತಾಂಶದ ನಂತರವೂ ಮುಖ್ಯಮಂತ್ರಿಗಳು ಪಟ್ಟು ಹಿಡಿದ ಕಾರಣ, ರಾಜ್ಯಪಾಲ ಆರ್.ಎನ್. ರವಿ ಅವರು ಕೋಲ್ಕತ್ತಾ ಗೆಜೆಟ್‌ನಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಐತಿಹಾಸಿಕ ವಿಜಯ ದಾಖಲಿಸಿ ಅಧಿಕಾರಕ್ಕೇರಲು ಸಜ್ಜಾಗಿದ್ದರೆ, ಮಮತಾ ಬ್ಯಾನರ್ಜಿ ಅವರ ಈ ಕಠಿಣ ನಿಲುವು ಪಶ್ಚಿಮ ಬಂಗಾಳದ ರಾಜಕಾರಣವನ್ನು ಮತ್ತಷ್ಟು ಸಂಘರ್ಷದ ಹಾದಿಗೆ ತಳ್ಳಿದೆ. ಸದ್ಯಕ್ಕೆ ವಿಧಾನಸಭೆ ವಿಸರ್ಜನೆಯಾಗಿದ್ದು, ಮುಂದಿನ ನಡೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular