ಮಂಗಳೂರು : ಕದ್ರಿ ಪಾರ್ಕ್ ಸಮೀಪ ಪ್ಯಾಂಗೋಲಿನ್ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಸಿಐಡಿ ಅರಣ್ಯ ಮೊಬೈಲ್ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಅರಣ್ಯ ವನ್ಯಜೀವಿ ಸಂಬಂಧಿತ ಅಕ್ರಮ ಚಟುವಟಿಕೆ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದಲ್ಲಿ ಮೇ 5ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ದಾಳಿ ನಡೆಸಲಾಯಿತು. ಆರೋಪಿಗಳು KA-05-MS-1049 ಸಂಖ್ಯೆಯ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಇದ್ದರು.
ಪರಿಶೀಲನೆ ವೇಳೆ ಆರೋಪಿಗಳು ಪ್ಯಾಂಗೋಲಿನ್ ಚಿಪ್ಪುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿರುವುದು ದೃಢಪಟ್ಟಿದ್ದು, ತಕ್ಷಣವೇ ಅವರನ್ನು ಬಂಧಿಸಿ, ವಶಪಡಿಸಿಕೊಂಡ ವಸ್ತುಗಳು ಹಾಗೂ ವಾಹನದೊಂದಿಗೆ ಪ್ರಕರಣ ದಾಖಲಿಸಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರಿಂದ 5.200 ಕೆಜಿ ಪ್ಯಾಂಗೋಲಿನ್ ಚಿಪ್ಪು,ಮಾರುತಿ ಸ್ವಿಫ್ಟ್ ಕಾರು ಒಟ್ಟು ಸುಮಾರು ₹3 ಲಕ್ಷ ಮೌಲ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು H.R. ಜಗದೀಶ್ (50) ಸಿದ್ದು ನೈಕ್ (38) ಬಾಬು (48) ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆ ಪವನ್ ನಿಲ್ಲೋರೆ ಮಾರ್ಗದರ್ಶನದಲ್ಲಿ ನಡೆದಿದ್ದು, ಸಿಐಡಿ ಅರಣ್ಯ ಮೊಬೈಲ್ ದಳದ ಪಿಎಸ್‌ಐ ದಿಲೀಪ್ ಜಿ.ಆರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ತಾರಾನಾಥ್ ಎಸ್ ಹಾಗೂ ಅಬ್ದುಲ್ ರವೂಫ್ ಭಾಗವಹಿಸಿದ್ದರು.
ಅರಣ್ಯ ಹಾಗೂ ವನ್ಯಜೀವಿ ಸಂಬಂಧಿತ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೆ : ಸಿಐಡಿ ಅರಣ್ಯ ಸೆಲ್, ಮಡಿಕೇರಿ: 9480800220 ಸಿಐಡಿ ಅರಣ್ಯ ಮೊಬೈಲ್ ದಳ, ಮಂಗಳೂರು: 8277949810 ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


