ಕೋಲ್ಕತಾ : ಪಶ್ಚಿಮ ಬಂಗಾಲದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರುವ ಹಾದಿ ಸುಗಮವಾಗಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ತಳಮಟ್ಟದಲ್ಲಿ ನಡೆಸಿದ ದೀರ್ಘಕಾಲದ ಸಂಘಟನಾ ಕಾರ್ಯ ಮಹತ್ವದ ಪಾತ್ರ ವಹಿಸಿದೆ ಎನ್ನಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಘದ ಕಾರ್ಯಕರ್ತರು ರಾಜ್ಯದಾದ್ಯಂತ ವ್ಯಾಪಕ ಜನಸಂಪರ್ಕ ಅಭಿಯಾನ ನಡೆಸಿದ್ದು, ಸುಮಾರು 250 ವಿಧಾನಸಭಾ ಕ್ಷೇತ್ರಗಳಲ್ಲಿ 2 ಲಕ್ಷಕ್ಕೂ ಅಧಿಕ ಸಭೆಗಳನ್ನು ಆಯೋಜಿಸಿರುವುದಾಗಿ ವರದಿಯಾಗಿದೆ.
ಮೂಲಗಳ ಪ್ರಕಾರ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 700ಕ್ಕೂ ಹೆಚ್ಚು ಸಭೆಗಳು ನಡೆದಿವೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಸಂಘಟಿಸಿ, ಬಿಜೆಪಿ ಪರ ವಾತಾವರಣ ನಿರ್ಮಿಸಲು ಸಂಘ ನಿರಂತರವಾಗಿ ಕಾರ್ಯನಿರ್ವಹಿಸಿತು ಎಂದು ಹೇಳಲಾಗಿದೆ.
ಬಂಗಾಲದಲ್ಲಿ ದೀರ್ಘಕಾಲದಿಂದ ಬಲಿಷ್ಠವಾಗಿದ್ದ ಪ್ರಾದೇಶಿಕ ಅಸ್ಮಿತೆಯನ್ನು ರಾಷ್ಟ್ರೀಯತೆಯ ಭಾವನೆಯೊಂದಿಗೆ ಜೋಡಿಸುವ ಪ್ರಯತ್ನ ನಡೆಸಲಾಯಿತು. ಜಾತಿ ಆಧಾರಿತ ವಿಭಜನೆಯ ಬದಲು “ಬಂಗಾಳಿ ಹಿಂದೂ” ಎಂಬ ಒಗ್ಗಟ್ಟಿನ ಮನೋಭಾವ ಬೆಳೆಸಲು ಸಂಘದ ವಿವಿಧ ಅಂಗಸಂಸ್ಥೆಗಳು ಕೆಲಸ ಮಾಡಿದ್ದವು ಎನ್ನಲಾಗಿದೆ.
ರಾಮನವಮಿ ಸೇರಿದಂತೆ ವಿವಿಧ ಹಿಂದೂ ಧಾರ್ಮಿಕ ಹಬ್ಬಗಳನ್ನು ಸಾಮೂಹಿಕ ಶಕ್ತಿ ಮತ್ತು ಏಕತೆಯ ಸಂಕೇತವಾಗಿ ಆಚರಿಸುವ ಮೂಲಕ ಜನರ ಗಮನ ಸೆಳೆಯಲಾಯಿತು. ಜೊತೆಗೆ, ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣ, ಸೇವಾ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ನೆರವು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿಯೂ ಪ್ರಭಾವ ವಿಸ್ತರಿಸಲಾಯಿತು.
ಇದಲ್ಲದೆ, ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಗಳು ಹಾಗೂ ಅಲ್ಲಿ ಹಿಂದೂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಡೆಸಿದ ಜಾಗೃತಿ ಅಭಿಯಾನವೂ ಮತದಾರರ ಮನೋಭಾವದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜಕೀಯ ವೀಕ್ಷಕರ ಅಭಿಪ್ರಾಯದಂತೆ, ಸಂಘದ ಈ “ಮೌನ ಕ್ರಾಂತಿ” ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಬೆಳವಣಿಗೆಗೆ ಬಲವಾದ ಅಡಿಪಾಯ ನಿರ್ಮಿಸಿದೆ.


