Saturday, July 18, 2026
Homeಜಿಲ್ಲೆಮಂಗಳೂರು : ಮೇ 28,29 ರಂದು ಅಮೃತಾನಂದಮಯಿ ಅಮ್ಮ ಮಂಗಳೂರಿಗೆ, ಪೂರ್ವಭಾವಿ ಸಾಮೂಹಿಕ ಪ್ರಾರ್ಥನಾ...

ಮಂಗಳೂರು : ಮೇ 28,29 ರಂದು ಅಮೃತಾನಂದಮಯಿ ಅಮ್ಮ ಮಂಗಳೂರಿಗೆ, ಪೂರ್ವಭಾವಿ ಸಾಮೂಹಿಕ ಪ್ರಾರ್ಥನಾ ಸಭೆ ಹಾಗೂ ಶಿವಶಕ್ತಿ ಹೋಮ”.

ಮಂಗಳೂರು : ಮೇ 28,29 ರಂದು ವಿಶ್ವ ವಿಖ್ಯಾತಿ ಹೊಂದಿರುವ ಮಾತಾ ಅಮೃತಾನಂದಮಯಿ ಅಮ್ಮನವರು ಮಂಗಳೂರಿಗೆ ಆಗಮಿಸುವ ಸಲುವಾಗಿ ನಗರದ ಬೋಳೂರಿನಲ್ಲಿ ಇರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾನುವಾರ ಪೂರ್ವಭಾವಿ ಪ್ರಾರ್ಥನಾ ಸಭೆ ಜರುಗಿತು.

ಪೂರ್ವಾಹ್ನ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಶಿವಶಕ್ತಿ ಹೋಮದೊಂದಿಗೆ ಚಾಲನೆ ದೊರೆಯಿತು. ಸ್ವಾಮಿನಿ ಮಂಗಳಾಮೃತ ಪ್ರಾಣರವರ ಉಪಸ್ಥಿತಿಯಲ್ಲಿ ಬ್ರಹ್ಮಚಾರಿ ರತೀಶ್ ಹೋಮ ನೆರವೇರಿಸಿದರು.ಅರ್ಚಕ ಗೋವಿಂದ ಸಹಕರಿಸಿದರು.ನಂತರ ನಡೆದ “ಗುರುವಂದನ” ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಅಮಿನ್ ದಂಪತಿಗಳು ಪಾದಪೂಜೆಗೈದರು.

ಈ ಸಂದರ್ಭದಲ್ಲಿ ಆಶೀರ್ವಚನವಿತ್ತು ನುಡಿದ ಸ್ವಾಮಿನಿ ಮಂಗಳಾಮೃತ ಪ್ರಾಣ ಇಲ್ಲಿನ ಅಮ್ಮನ ಭಕ್ತರು ಮತ್ತು ಸ್ವಯಂ ಸೇವಕರು ಕಳೆದ ಏಳು ವರ್ಷಗಳಿಂದ ಅಮ್ಮನವರ ಆಗಮನ ಹಾಗೂ ಅಪ್ಪುಗೆಯ ಅನುಗ್ರಹ ಪಡೆದು ಆಂತರಿಕ ಪರಿಶುದ್ಧತೆಯೊಂದಿಗೆ ಜೀವನದಲ್ಲಿ ನವಚೈತನ್ಯ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ. ತಮ್ಮ ಆರಾಧ್ಯಮಾತೆ ಸ್ವತಃ ನಾವಿರುವಲ್ಲಿಗೇ ಬರುವುದೆಂದರೆ ಅದೊಂದು ಮಹಾ ಸಂಭ್ರಮದ ಲಕ್ಷಣವಾಗಿದೆ. 28 ಬ್ರಹ್ಮಸ್ಥಾನಗಳಿದ್ದರೂ ಅಮ್ಮನವರಿಗೆ ಮಂಗಳೂರಿನ ಬಗ್ಗೆ ಹೆಚ್ಚಿನ ಒಲವು ಇರುವ ಕಾರಣದಿಂದಲೇ ಇಲ್ಲಿ ನಮಗೆ ಆಮ್ಮನ ದರ್ಶನ ಪಡೆಯುವ ಸೌಭಾಗ್ಯ ಬಂದಿದೆ ಎಂದರು. ಅಮ್ಮನವರ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಸರ್ವರ ಸಹಕಾರ ಕೋರಿದರು.

ವಿಶೇಷ ಪೂಜೆ “ಉದಯಾಸ್ತಮಾನ “ಪೂಜಾ ಪ್ರಚಾರಕ್ಕೆ ಡಾ.ಜೀವರಾಜ್ ಸೊರಕೆ ಚಾಲನೆ ನೀಡಿದರು, ಲೇಖನ ಯಜ್ಞದ ಬಗ್ಗೆ ಡಾ. ವಸಂತ ಕುಮಾರ್ ಪೆರ್ಲ ಮಾಹಿತಿ ನೀಡಿದರು.ಸಾಮೂಹಿಕ ಲಲಿತಾ ಸಹಸ್ರನಾಮ ದ ಬಗ್ಗೆ ಕಲ್ಪನಾ ಭಾಸ್ಕರ್, ಸಿ ಎ. ವಾಮನ್ ಕಾಮತ್, ಕೃಷ್ಣ ಶೆಟ್ಟಿ , ಯುವ ಘಟಕ ಅಯುಧ್ ಅಧ್ಯಕ್ಷೆ ವಕೀಲೆ ಸ್ವಸ್ತಿ ಶೆಟ್ಟಿ ಯವರು ಕಾರ್ಯಕ್ರಮ ಆಯೋಜನೆ ಬಗ್ಗೆ ಮಾಹಿತಿ ನೀಡಿದರು.

ಇದೆ ಸಂದರ್ಭ ಸ್ವಯಂಸೇವಕರ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಧ್ಯಕ್ಷರಾದ ಸುರೇಶ್ ಅಮೀನ್ ಸ್ವಾಗತಿಸಿದರು, ಕೋಶಾಧಿಕಾರಿ ಸಿ.ಎ ರಾಮನಾಥ್ ವಂದಿಸಿದರು. ಡಾ.ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಗೋವಾ, ಕೊಡಗು, ಕಾರವಾರ,ಕುಂದಾಪುರ, ಶಿರೂರು,ಉಡುಪಿ,ಕಾರ್ಕಳ, ಸುಬ್ರಹ್ಮಣ್ಯ,ಸುಳ್ಯ, ಕಡಬ,ಮೂಡಬಿದ್ರೆ,ಮುಲ್ಕಿಮುಂತಾದ ಸ್ಥಳ ಗಳಿಂದ ಸೇವಾ ಸಮಿತಿ ಪದಾಧಿಕಾರಿಗಳು, ಸ್ವಯಂಸೇವಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಮಹಾ ಆರತಿ ಮತ್ತು ಅನ್ನಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಪೂರ್ಣಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular