ಮಂಗಳೂರು : ಪ್ರಧಾನಮಂತ್ರಿ Narendra Modi ನೇತೃತ್ವದ ಎನ್ಡಿಎ ಸರ್ಕಾರವು 12 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ “ವಿಶ್ವಾಸ, ಅಭಿವೃದ್ಧಿ ಮತ್ತು ಜನಕಲ್ಯಾಣದ 12 ವರ್ಷಗಳು” ಎಂಬ ಘೋಷಣೆಯಡಿ ಜೂನ್ 5ರಿಂದ 21ರವರೆಗೆ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ಅಭಿಯಾನ ಆಯೋಜಿಸಲಾಗಿದೆ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಾಲ ರವರು ತಿಳಿಸಿದ್ದಾರೆ.
ಮಾಧ್ಯಮ ಸಂವಾದ.
ಜೂನ್ 8 ಮತ್ತು 9ರಂದು ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೇಂದ್ರ ಸಚಿವರು ಮಾಧ್ಯಮ ಸಂವಾದ ನಡೆಸಲಿದ್ದಾರೆ. ರಾಜ್ಯದಲ್ಲಿ ಜೂನ್ 11 ಮತ್ತು 12ರಂದು ರಾಜ್ಯಾಧ್ಯಕ್ಷರು, ಸಂಸದರು, ಶಾಸಕರು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸುವ ಮಾಧ್ಯಮ ಸಂವಾದಗಳು ನಡೆಯಲಿವೆ.
ವಿಶೇಷ ಸಂಪರ್ಕ ಅಭಿಯಾನ ಜೂನ್ 8ರಿಂದ 14ರವರೆಗೆ ವಿಶೇಷ ಜನಸಂಪರ್ಕ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಪ್ರಗತಿ ಪಥ ಯಾತ್ರೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ಹಾಗೂ ಶಾಸಕರು ತಮ್ಮ ಕ್ಷೇತ್ರದ ಪ್ರತಿಯೊಂದು ಮಂಡಲದಲ್ಲೂ ಒಂದು ದಿನ ವಾಸ್ತವ್ಯ ಹೂಡಿ ಜನರೊಂದಿಗೆ ನೇರ ಸಂಪರ್ಕ ಸಾಧಿಸಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 500 ಸಮಾಜಮುಖಿ ಪ್ರಭಾವಿ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಜನಪರ ಯೋಜನೆಗಳ ನೋಂದಣಿ ಶಿಬಿರ
ಜೂನ್ 12ರಿಂದ 20ರವರೆಗೆ ಜಿಲ್ಲಾ ಮಟ್ಟದಿಂದ ಬೂತ್ ಮಟ್ಟದವರೆಗೆ ಮೂರು ದಿನಗಳ ವಿಶೇಷ ಶಿಬಿರಗಳನ್ನು ಆಯೋಜಿಸಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಹರನ್ನು ನೋಂದಾಯಿಸಲಾಗುತ್ತದೆ.
ಆಯುಷ್ಮಾನ್ ಭಾರತ, ಆಯುಷ್ಮಾನ್ ವಯೋ ವಂದನಾ, ಪಿಎಂ ಸೂರ್ಯ ಘರ್, ಪಿಎಂ ಸ್ವನಿಧಿ ಮತ್ತು ಲಕ್ಷಪತಿ ದೀದಿ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಸಾಧನೆಗಳ ಪ್ರದರ್ಶನ ಪ್ರತಿ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಎನ್ಡಿಎ ಸರ್ಕಾರದ ಸಾಧನೆಗಳ ಪ್ರದರ್ಶನ ಏರ್ಪಡಿಸಲಾಗುತ್ತದೆ. ಚಿತ್ರಕಲಾ ಸ್ಪರ್ಧೆ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ಫಲಾನುಭವಿಗಳ ಪ್ರತಿಕ್ರಿಯೆ ದಾಖಲಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಪರಿಸರ ಮತ್ತು ಯೋಗ ದಿನಾಚರಣೆ
ವಿಶ್ವ ಪರಿಸರ ದಿನವಾದ ಜೂನ್ 5ರಂದು “ತಾಯಿಯ ಹೆಸರಿನಲ್ಲಿ ಒಂದು ಸಸಿ” ಅಭಿಯಾನದಡಿ ಪ್ರತಿ ಮಂಡಲದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಮಂಡಲ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಸ್ಥಳೀಯ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ಯೋಗಾಭ್ಯಾಸ ಕಾರ್ಯಕ್ರಮಗಳು ನಡೆಯಲಿವೆ.
ರಾಜ್ಯ ಮಟ್ಟದ ತಂಡ : ಅಭಿಯಾನದ ರಾಜ್ಯ ಸಂಚಾಲಕರಾಗಿ V. ಸುನಿಲ್ ಕುಮಾರ್ ರವರನ್ನು ನೇಮಿಸಲಾಗಿದೆ. ವಿವಿಧ ಹಂತಗಳಲ್ಲಿ ತಂಡಗಳನ್ನು ರಚಿಸಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪಕ್ಷದ ಮಾರ್ಗಸೂಚಿಯಂತೆ ಕಾರ್ಪೂಲಿಂಗ್, ಸಾರ್ವಜನಿಕ ಸಾರಿಗೆ ಬಳಕೆ ಹಾಗೂ ಸ್ವದೇಶಿ ಮತ್ತು ಸ್ಥಳೀಯ ಉತ್ಪನ್ನಗಳ ಬಳಕೆಗೆ ಉತ್ತೇಜನ ನೀಡುವ ಜಾಗೃತಿ ಕಾರ್ಯಕ್ರಮಗಳನ್ನೂ ಈ ಅವಧಿಯಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಮೇಯರ್ ಪ್ರೇಮಾನಂದ ಸಂಜಯ್ ಪ್ರಭು, ನಂದನ್ ಮಲ್ಯ, ಮಂಜುಳಾ ರಾವ್, ಧನಲಕ್ಷ್ಮೀ ಗಟ್ಟಿ, ಸುಮಿತ್ರಾ ಕರಿಯ, ಕದ್ರಿ ಮನೋಹರ್ ಶೆಟ್ಟಿ, ಅರುಣ್ ಶೇಟ್ ಶೆಟ್ಟಿ,ಸುಜಿತ್ ಪ್ರತಾಪ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.


