ಮಂಗಳೂರು : ಗುರುಪುರ ಸಮೀಪದ ಬೈಲುಪೇಟೆಯಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲುಪೇಟೆ ಮಸೀದಿ ಸಮೀಪದ ಪರಂಬೋಕು ತೋಡಿನ ಹೂಳೆತ್ತುವ ಕಾರ್ಯದ ವೇಳೆ ಎಚ್‌ಪಿಸಿಎಲ್‌ನ ಎಲ್‌ಪಿಜಿ ಗ್ಯಾಸ್ ಪೂರೈಕೆ ಪೈಪ್‌ಲೈನ್ ಅತ್ಯಂತ ಮೇಲ್ಮಟ್ಟದಲ್ಲಿ ಹಾದು ಹೋಗುತ್ತಿರುವುದು ಬೆಳಕಿಗೆ ಬಂದಿದೆ.
ಸ್ಥಳೀಯ ಉದ್ಯಮಿ ಹರೀಶ್ ಶೆಟ್ಟಿ ತಮ್ಮ ಸ್ವಂತ ವೆಚ್ಚದಲ್ಲಿ ತೋಡಿನ ಹೂಳೆತ್ತುವ ಕಾಮಗಾರಿ ನಡೆಸುತ್ತಿದ್ದ ವೇಳೆ ಜೆಸಿಬಿ ಕಾರ್ಯಾಚರಣೆಯಲ್ಲಿ ಪೈಪ್‌ಲೈನ್‌ಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಅನಿಲ ಸೋರಿಕೆ ಅಥವಾ ದೊಡ್ಡ ಮಟ್ಟದ ಅವಘಡ ಸಂಭವಿಸಿಲ್ಲ.
ಸ್ಥಳೀಯರ ಪ್ರಕಾರ, ಮಂಗಳೂರಿನಿಂದ ಹಾಸನದತ್ತ ಸಾಗುವ ಎಚ್‌ಪಿಸಿಎಲ್ ಗ್ಯಾಸ್ ಪೈಪ್‌ಲೈನ್ ಕೇವಲ ಎರಡೂವರೆ ಅಡಿ ಆಳದಲ್ಲಿ ಅಳವಡಿಕೆಯಾಗಿದ್ದು, ಇದೇ ಪ್ರದೇಶದಲ್ಲಿ ಗೈಲ್ ಹಾಗೂ ಪೆಟ್ರೋನೆಟ್ ಕಂಪೆನಿಗಳ ಪೈಪ್‌ಲೈನ್‌ಗಳು ಹೆಚ್ಚಿನ ಆಳದಲ್ಲಿ ಸುರಕ್ಷಿತವಾಗಿ ಅಳವಡಿಕೆಯಾಗಿವೆ.
ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಎಚ್‌ಪಿಸಿಎಲ್ ಸುರಕ್ಷತಾ ಅಧಿಕಾರಿ ನಯನ್ ಪಾಲ್ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರೊಂದಿಗೆ ಚರ್ಚಿಸಿದರು. ಸುಮಾರು ಹತ್ತು ವರ್ಷಗಳ ಹಿಂದೆ ಪೈಪ್‌ಲೈನ್ ಅಳವಡಿಕೆಯಾಗಿದ್ದು, ನಂತರದ ವರ್ಷಗಳಲ್ಲಿ ಭೌಗೋಳಿಕ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಈ ವೇಳೆ ಮಾತನಾಡಿದ ಸ್ಥಳೀಯ ಉದ್ಯಮಿ ಹರೀಶ್ ಶೆಟ್ಟಿ, “ಪೈಪ್‌ಲೈನ್ ಅನ್ನು ಕನಿಷ್ಠ ಹತ್ತು ಅಡಿ ಆಳದಲ್ಲಿ ಮರು ಅಳವಡಿಸಬೇಕು. ಮೇಲ್ಭಾಗದಲ್ಲಿ ಕಾಂಕ್ರೀಟ್ ಸುರಕ್ಷತಾ ಹಾಸು ನಿರ್ಮಿಸಿ ಭವಿಷ್ಯದ ಅಪಾಯಗಳನ್ನು ತಪ್ಪಿಸಬೇಕು” ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಚ್‌ಪಿಸಿಎಲ್ ಸುರಕ್ಷತಾ ಅಧಿಕಾರಿ ನಯನ್ ಪಾಲ್, “ಹಾನಿಗೀಡಾದ ಭಾಗವನ್ನು ತಕ್ಷಣ ದುರಸ್ತಿ ಮಾಡಲಾಗುವುದು. ಪೈಪ್‌ಲೈನ್ ಅನ್ನು ಇನ್ನಷ್ಟು ಆಳದಲ್ಲಿ ಅಳವಡಿಸುವ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು” ಎಂದು ತಿಳಿಸಿದ್ದಾರೆ.
ಜೆಸಿಬಿ ಕಾರ್ಯಾಚರಣೆಯ ವೇಳೆ ಪೈಪ್‌ಲೈನ್ ಸಂಪೂರ್ಣ ಒಡೆದು ಹೋಗಿದ್ದರೆ ಭಾರೀ ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಬೈಲುಪೇಟೆಯಲ್ಲಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಅದೃಷ್ಟವಶಾತ್ ತಪ್ಪಿದರೂ, ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್ ಸುರಕ್ಷತೆ ಕುರಿತ ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಸಂಬಂಧಪಟ್ಟ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

