ಬೆಳಗಾವಿ : ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಅವರ ದಿಢೀರ್ ಭೇಟಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಬೆಂಗಳೂರಿನಲ್ಲಿರುವ ಲಕ್ಷ್ಮಣ ಸವದಿ ಅವರ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹುಕ್ಕೇರಿ ಬಿಜೆಪಿ ಶಾಸಕ ನಿಖಿಲ್ ಕತ್ತಿ ಅವರು ರಮೇಶ್ ಕತ್ತಿ ಅವರೊಂದಿಗೆ ಸವದಿ ಅವರನ್ನು ಭೇಟಿಯಾಗಿದ್ದಾರೆ. ನೂತನ ಸಹಕಾರ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಲಕ್ಷ್ಮಣ ಸವದಿ ಅವರನ್ನು ರಮೇಶ್ ಕತ್ತಿ ಅಭಿನಂದಿಸಿದ್ದಾರೆ.
ಭೇಟಿಯ ಫೋಟೊವನ್ನು ಸಚಿವ ಸವದಿ ಹಾಗೂ ರಮೇಶ್ ಕತ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸವದಿ–ಜಾರಕಿಹೊಳಿ ಕುಟುಂಬದ ನಡುವೆ ಭಿನ್ನಾಭಿಪ್ರಾಯ
ಲಕ್ಷ್ಮಣ ಸವದಿ ಹಾಗೂ ಜಾರಕಿಹೊಳಿ ಕುಟುಂಬದ ನಡುವೆ ಹಿಂದಿನಿಂದಲೂ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ಸಹಕಾರ ಕ್ಷೇತ್ರದಲ್ಲೂ ಉಭಯ ಕುಟುಂಬಗಳ ನಡುವೆ ಸಂಘರ್ಷ ಕಂಡುಬಂದಿದೆ.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ಸವದಿ ವಿರುದ್ಧ ಜಾರಕಿಹೊಳಿ ಸಹೋದರರು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು. ನಿರ್ದೇಶಕ ಸ್ಥಾನಕ್ಕೆ ಲಕ್ಷ್ಮಣ ಸವದಿ ವಿರುದ್ಧ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದ್ದರು.
ಜಾರಕಿಹೊಳಿ–ಕತ್ತಿ ಕುಟುಂಬದ ನಡುವೆಯೂ ಒಡಕು?
ಇದರ ನಡುವೆ ಕಳೆದೊಂದು ವರ್ಷದಿಂದ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಗಳ ನಡುವೆಯೂ ರಾಜಕೀಯ ಭಿನ್ನಾಭಿಪ್ರಾಯದ ಚರ್ಚೆ ನಡೆದಿದೆ. ಈ ಬೆಳವಣಿಗೆಗಳ ನಡುವೆಯೇ ಲಕ್ಷ್ಮಣ ಸವದಿ ಹಾಗೂ ರಮೇಶ್ ಕತ್ತಿ ಅವರ ಭೇಟಿ ಇದೀಗ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಈ ಭೇಟಿ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಯಾವ ರೀತಿಯ ರಾಜಕೀಯ ಲೆಕ್ಕಾಚಾರಕ್ಕೆ ಕಾರಣವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

