ಪುತ್ತೂರು : ಪುತ್ತೂರು, ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲು ಹಾಗೂ ಬೆಳ್ತಂಗಡಿಯಲ್ಲಿ ಶೋರೂಮ್‌ಗಳನ್ನು ಹೊಂದಿರುವ ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಮಾಲೀಕರಾದ ಖ್ಯಾತ ಚಿನ್ನದ ಉದ್ಯಮಿ ಸರಾಫ್ ಮುಳಿಯ ಶ್ಯಾಮ ಭಟ್ (81) ಅವರು ಅಕ್ಟೋಬರ್ 4ರಂದು ನಿಧನರಾದರು.
ಪುತ್ತೂರಿನ ಪಾಂಗಳಾಯಿಯಲ್ಲಿರುವ ಶ್ಯಾಮಲೋಚನಾ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಅವರು ಕೊನೆಯುಸಿರೆಳೆದರು. ಚಿನ್ನಾಭರಣ, ಬೆಳ್ಳಿ ಹಾಗೂ ವಜ್ರಾಭರಣ ವ್ಯವಹಾರ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶ್ಯಾಮ ಭಟ್ ಅವರು ‘ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್’ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಿಗೂ ಉದಾರವಾಗಿ ದಾನ ನೀಡುತ್ತಿದ್ದ ಅವರು ಕೊಡುಗೈ ದಾನಿ ಎಂದೇ ಗುರುತಿಸಿಕೊಂಡಿದ್ದರು.
ಮೃತರು ಪುತ್ರರಾದ ಕೇಶವಪ್ರಸಾದ ಮುಳಿಯ, ಕೃಷ್ಣನಾರಾಯಣ ಮುಳಿಯ, ಪುತ್ರಿ ವಿದ್ಯಾ ಸರಸ್ವತಿ, ಅಳಿಯ ಡಾ. ಶ್ಯಾಮಸುಂದರ್, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿ ಕೃಷ್ಣನಾರಾಯಣ ಮುಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಂತಾಪ ವ್ಯಕ್ತವಾಗಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.

