ಬೀದರ್ : ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಬಸ್‌ನ ಸ್ಟೇರಿಂಗ್ ಅನ್ನು ಏಕಾಏಕಿ ಬಿಗಿಯಾಗಿ ಹಿಡಿದ ಪರಿಣಾಮ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಬೀದರ್ ಹೊರವಲಯದ ಶಹಾಪುರ ಗೇಟ್ ಬಳಿ ಭಾನುವಾರ ಸಂಜೆ ನಡೆದಿದೆ.
ಹೈದರಾಬಾದ್‌ನಿಂದ ಮಹಾರಾಷ್ಟ್ರದ ಉದ್ಗೀರ್‌ಗೆ ತೆರಳುತ್ತಿದ್ದ ಬಸ್ ಇಂದು ಸಂಜೆ ಸುಮಾರು 5 ಗಂಟೆ ವೇಳೆಗೆ ಶಹಾಪುರ ಗೇಟ್ ಸಮೀಪ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಕುಡಿದ ಮತ್ತಿನಲ್ಲಿದ್ದ ಮಹಾರಾಷ್ಟ್ರ ಮೂಲದ ಪ್ರಯಾಣಿಕನೊಬ್ಬ ಚಾಲಕನ ನಿಯಂತ್ರಣಕ್ಕೆ ಅಡ್ಡಿಪಡಿಸಿ ಸ್ಟೇರಿಂಗ್ ಅನ್ನು ಬಿಗಿಯಾಗಿ ಹಿಡಿದಿದ್ದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಬಸ್ ಚಾಲಕ ವಿಕಾಸ್ ಸೇರಿದಂತೆ 11 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಬಾಲಾಜಿ, ಪವನ್, ನೂರ್ ಅಹ್ಮದ್,ನರಸಿಂಗ್, ಪೂಜಾ, ಸುರೇಖಾ ಹಾಗೂ ಸೃಷ್ಠಿ ಸೇರಿದಂತೆ ಹಲವರು ಸೇರಿದ್ದಾರೆ.
ತಿರುಪತಿಗೆ ಕುಟುಂಬ ಸಮೇತ ತೆರಳಿ ವಾಪಸ್ ಆಗುತ್ತಿದ್ದ ಒಂದೇ ಕುಟುಂಬದ 8 ಮಂದಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಬೀದರ್‌ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


