ಕ್ಯಾಲಿಫೋರ್ನಿಯಾ : ಮೆಟಾ ಒಡೆತನದ ವಾಟ್ಸಾಪ್‌ನ ಹೊಸ ಮುಖ್ಯಸ್ಥರಾಗಿ ಭಾರತೀಯ ಉದ್ಯಮಿ ಹಾಗೂ CRED ಸಂಸ್ಥಾಪಕ ಕುನಾಲ್ ಶಾ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಏಳು ವರ್ಷಗಳಿಂದ ವಾಟ್ಸಾಪ್ ಮುಖ್ಯಸ್ಥರಾಗಿದ್ದ ವಿಲ್ ಕ್ಯಾತ್‌ಕಾರ್ಟ್ ಅವರು ಹೊಸ ಜವಾಬ್ದಾರಿಗಾಗಿ ಮೆಟಾದ ಮತ್ತೊಂದು ವಿಭಾಗಕ್ಕೆ ವರ್ಗಾವಣೆಯಾಗಲಿದ್ದಾರೆ.
ಮೆಟಾ ಸಂಸ್ಥೆಯು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ CRED ಸಂಸ್ಥೆಯಲ್ಲಿ ಸುಮಾರು 900 ಮಿಲಿಯನ್ ಡಾಲರ್ (₹8,500 ಕೋಟಿ) ಹೂಡಿಕೆ ಮಾಡಿದ್ದು, ಈ ಒಪ್ಪಂದದ ಭಾಗವಾಗಿ ಕುನಾಲ್ ಶಾ ವಾಟ್ಸಾಪ್ ಜಾಗತಿಕ ನಾಯಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ.
2018ರಲ್ಲಿ ಸ್ಥಾಪನೆಯಾದ CRED, ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಪಾವತಿ ಹಾಗೂ ಫಿನ್‌ಟೆಕ್ ಸೇವೆಗಳ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು, ಪ್ರಸ್ತುತ ಸುಮಾರು 17 ಮಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿದೆ.
ಕುನಾಲ್ ಶಾ ಈ ಹಿಂದೆ FreeCharge ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮಾರಾಟ ಮಾಡಿದ್ದರು. ಇದೀಗ ವಾಟ್ಸಾಪ್‌ನಂತಹ ಜಾಗತಿಕ ಮೆಸೇಜಿಂಗ್ ವೇದಿಕೆಯ ಚುಕ್ಕಾಣಿ ಹಿಡಿಯುವ ಮೂಲಕ ಮತ್ತೊಬ್ಬ ಭಾರತೀಯ ಜಾಗತಿಕ ಟೆಕ್ ನಾಯಕನಾಗಿ ಹೊರಹೊಮ್ಮಿದ್ದಾರೆ.


