ಬಳ್ಳಾರಿ : ಬಳ್ಳಾರಿಯ ಅಂದ್ರಾಳು ಪ್ರದೇಶದಲ್ಲಿ ಪತ್ನಿ ಹಾಗೂ ಏಳು ತಿಂಗಳ ಹೆಣ್ಣುಮಗುವನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಚ್ಚಿಬೀಳಿಸಿದೆ. ಪ್ರಕರಣದ ಆರೋಪಿ ಹೊನ್ನೂರಸ್ವಾಮಿ ಬಳಿಕ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.
ಮೃತರನ್ನು ರಾಜೇಶ್ವರಿ (25) ಹಾಗೂ ಏಳು ತಿಂಗಳ ಅಶ್ವಿನಿ ಎಂದು ಗುರುತಿಸಲಾಗಿದೆ. ಪತ್ನಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಹೊನ್ನೂರಸ್ವಾಮಿ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಶುಕ್ರವಾರ ನಸುಕಿನ ವೇಳೆ ಪತ್ನಿ ಮತ್ತು ಮಗು ಮಲಗಿದ್ದಾಗ ಸುತ್ತಿಗೆಯಿಂದ ತಲೆಗೆ ಬಲವಾಗಿ ಹೊಡೆದು ಇಬ್ಬರನ್ನೂ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಕೃತ್ಯ ಎಸಗಿದ ಬಳಿಕ ಪರಾರಿಯಾಗಿದ್ದ ಆರೋಪಿ, ಹೊರಗಡೆ ಇದ್ದರೆ ಸಾರ್ವಜನಿಕರು ಹಲ್ಲೆ ನಡೆಸುವ ಭಯದಿಂದ ಎಪಿಎಂಸಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಯ ಈ ದಾರುಣ ಘಟನೆ ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದ್ದು, ಅಂದ್ರಾಳು ಪ್ರದೇಶದ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.


