Tuesday, August 18, 2026
Homeದೇಶನವದೆಹಲಿ : ಎನ್‌ಟಿಎ ಸುಧಾರಣೆಗೆ ಸಚಿವ ಪ್ರಹ್ಲಾದ್ ಜೋಶಿ ಅಖಾಡಕ್ಕೆ,ನೀಟ್ ಅಕ್ರಮದ ಬೆನ್ನಲ್ಲೇ 50 ಎನ್‌ಟಿಎ...

ನವದೆಹಲಿ : ಎನ್‌ಟಿಎ ಸುಧಾರಣೆಗೆ ಸಚಿವ ಪ್ರಹ್ಲಾದ್ ಜೋಶಿ ಅಖಾಡಕ್ಕೆ,ನೀಟ್ ಅಕ್ರಮದ ಬೆನ್ನಲ್ಲೇ 50 ಎನ್‌ಟಿಎ ಸಿಬ್ಬಂದಿ ವಜಾ..!

ಹೊಸದಿಲ್ಲಿ : ನೀಟ್ ಪರೀಕ್ಷೆಯ ಅಕ್ರಮ ಹಾಗೂ ಯುಜಿಸಿ-ನೆಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಆಮೂಲಾಗ್ರ ಸುಧಾರಣೆಗೆ ಮುಂದಾಗಿದ್ದಾರೆ.

ಭವಿಷ್ಯದಲ್ಲಿ ದೋಷರಹಿತ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ಪರೀಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಎನ್‌ಟಿಎಯ ಆಂತರಿಕ ಪ್ರಕ್ರಿಯೆಗಳು ಮತ್ತು ನಿಯಮಾವಳಿಗಳನ್ನು ಮರುಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದ್ದಾರೆ.

ಸೋಮವಾರ ಎನ್‌ಟಿಎ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಸಚಿವ ಜೋಶಿ, ಪರೀಕ್ಷಾ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಪರೀಕ್ಷಾ ವ್ಯವಸ್ಥೆ ಸುಧಾರಣೆ ಹಾಗೂ ಯುಜಿಸಿ-ನೆಟ್ ಮರುಪರೀಕ್ಷೆಗೆ ಕೈಗೊಳ್ಳುತ್ತಿರುವ ಸಿದ್ಧತೆಗಳ ಕುರಿತು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ನೀಟ್ ಅಕ್ರಮ : 50 ಸಿಬ್ಬಂದಿ ವಜಾ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಟಿಎಯ 50 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಜಾಗೊಂಡ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗಿದೆ. ಎನ್‌ಟಿಎಯ ಎಲ್ಲ ಪರೀಕ್ಷಾ ಪ್ರಕ್ರಿಯೆಗಳನ್ನು ಸಮಗ್ರವಾಗಿ ಪರಿಶೋಧನೆಗೆ ಒಳಪಡಿಸಿ, ಇದುವರೆಗೆ ಕೈಗೊಂಡಿರುವ ಕ್ರಮಗಳು ಹಾಗೂ ಮುಂದಿನ ಸುಧಾರಣಾ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸಚಿವ ಜೋಶಿ ಸೂಚಿಸಿದ್ದಾರೆ.

ಪಾರದರ್ಶಕ ಪರೀಕ್ಷಾ ವ್ಯವಸ್ಥೆ, ಕಟ್ಟುನಿಟ್ಟಿನ ನಿಯಮಗಳು ಹಾಗೂ ಜವಾಬ್ದಾರಿತನಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಎನ್‌ಟಿಎಯ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular