ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಹೊಲಗದ್ದೆ ಗ್ರಾಮದಲ್ಲಿ ಮತ್ತೆ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಮಗಳೂರು ತಾಲೂಕಿನ ಹೊಲಗದ್ದೆ–ಕವಿಕಲ್ ಮಠ ರಸ್ತೆಯಲ್ಲಿ ಸೂರ್ಯಾಸ್ತದ ದೃಶ್ಯ ವೀಕ್ಷಿಸಲು ತೆರಳಿದ್ದ ಪ್ರವಾಸಿಗರ ಎದುರು ಬೃಹತ್ ಗಾತ್ರದ ಹುಲಿ ಕಾಣಿಸಿಕೊಂಡಿದೆ. ಕೆಲ ಹೊತ್ತು ರಸ್ತೆಯಲ್ಲೇ ನಿಂತಿದ್ದ ಹುಲಿ, ಪ್ರವಾಸಿಗರ ವಾಹನವನ್ನು ದಿಟ್ಟಿಸಿ ನೋಡಿದ್ದು, ಈ ದೃಶ್ಯ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ.
ಹುಲಿಯನ್ನು ಕಂಡು ಪ್ರವಾಸಿಗರು ಭಯಭೀತರಾಗಿದ್ದು, ನಂತರ ಹುಲಿ ಅರಣ್ಯದತ್ತ ತೆರಳಿದೆ ಎಂದು ತಿಳಿದುಬಂದಿದೆ. ಮುತ್ತೋಡಿ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಹುಲಿಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳದಲ್ಲಿ ನಿಗಾ ಹೆಚ್ಚಿಸಿ, ಗ್ರಾಮಸ್ಥರು ಹಾಗೂ ಪ್ರವಾಸಿಗರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆ ಸಹ ಸಾರ್ವಜನಿಕರು ಅನಗತ್ಯವಾಗಿ ಅರಣ್ಯ ಪ್ರದೇಶದಲ್ಲಿ ಸಂಚರಿಸದಂತೆ ಹಾಗೂ ಹುಲಿ ಕಂಡುಬಂದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದೆ.


