ಗದಗ : ಗದಗ ಜಿಲ್ಲೆಯಲ್ಲಿ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ನಗರದ ಕರಿಯಮ್ಮ ಕಲ್ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಸಂಪತ್ ದಂಡಗಿ (38) ಎಂದು ಗುರುತಿಸಲಾಗಿದೆ. ಬಡ್ಡಿ ಹಣಕ್ಕಾಗಿ ನಿರಂತರ ಕಿರುಕುಳ ಹಾಗೂ ಬೆದರಿಕೆ ನೀಡಿದ್ದರಿಂದಲೇ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಸ್ನೇಹಾ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬದವರ ಪ್ರಕಾರ, ಧರ್ಮಗೌಡ ಕರಿಯನಗೌಡ್ರ ಎಂಬಾತ ಸಂಪತ್ ಅವರಿಗೆ ನಿರಂತರವಾಗಿ ಕರೆ ಮಾಡಿ ಹಣಕ್ಕಾಗಿ ಒತ್ತಡ ಹಾಕುತ್ತಿದ್ದ. ಅಲ್ಲದೆ ಪತ್ನಿ ಸ್ನೇಹಾಗೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆತ್ಮಹತ್ಯೆಗೆ ಮುನ್ನ ಸಂಪತ್ ವಿಡಿಯೋ ಸಂದೇಶವೊಂದನ್ನು ದಾಖಲಿಸಿದ್ದು, ಅದರಲ್ಲಿ ಧರ್ಮಗೌಡ ಕರಿಯನಗೌಡ್ರ ಅವರೊಂದಿಗೆ ಹಣಕಾಸಿನ ವ್ಯವಹಾರ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಸಮಯ ಕೇಳಿದ್ದಕ್ಕೆ ಬೇರೆಯವರ ಮೂಲಕ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ. ಜೊತೆಗೆ ಮಾರುತಿ ಕರ್ಣೆ ಎಂಬಾತ ತನ್ನ ಬಗ್ಗೆ “ಊರು ಬಿಟ್ಟು ಹೋಗಿದ್ದಾನೆ” ಎಂದು ಅಪಪ್ರಚಾರ ಮಾಡಿದ್ದಾನೆ ಎಂದೂ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಘಟನೆ ಬಳಿಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಡ್ಡಿ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಮೃತರು ಮಾಡಿರುವ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.


