ಕಲಬುರಗಿ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ (KSRP) ಪೇದೆ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ್ (ಬಿ) ಗ್ರಾಮದ ಬಳಿ ಸಂಭವಿಸಿದೆ.
ಮೃತರನ್ನು ಧರೆಪ್ಪ ಅಂಜುಟಗಿ (26) ಎಂದು ಗುರುತಿಸಲಾಗಿದೆ. ಅವರು ಕಲಬುರಗಿಯಿಂದ ಶಿರವಾಳ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಗೊಬ್ಬೂರ್ (ಬಿ) ಗ್ರಾಮದ ಸಮೀಪ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಧರೆಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ತಮ್ಮರಾಯ ಪಾಟೀಲ್ ಹಾಗೂ ಸಿಪಿಐ ಲಖನ್ ಮಸಗಪ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ದೇವಲ ಗಾಣಗಾಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕರ ಪತ್ತೆಗೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


