Tuesday, September 22, 2026
Homeಜಿಲ್ಲೆಮಂಗಳೂರು : ದ.ಕ. ಜಿಲ್ಲೆ ದೇಶದ ಪ್ರಮುಖ ವೈದ್ಯಕೀಯ ಜಾಲವಾಗಲಿ : ಕೇಂದ್ರ ಸಚಿವ ಪ್ರಹ್ಲಾದ್...

ಮಂಗಳೂರು : ದ.ಕ. ಜಿಲ್ಲೆ ದೇಶದ ಪ್ರಮುಖ ವೈದ್ಯಕೀಯ ಜಾಲವಾಗಲಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಮೂಡುಬಿದಿರೆ : ದಕ್ಷಿಣ ಕನ್ನಡ ಜಿಲ್ಲೆಯನ್ನು ದೇಶದ ಪ್ರಮುಖ ವೈದ್ಯಕೀಯ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ವಿಪುಲ ಅವಕಾಶಗಳಿವೆ. ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೇಂದ್ರ ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಮಿಜಾರುಗುತ್ತಿನ ಶ್ರೀಮತಿ ಸುಂದರಿ ಆನಂದ ಆಳ್ವ ವೇದಿಕೆಯಲ್ಲಿ ಸೋಮವಾರ ಆಳ್ವಾಸ್ ಮೆಡಿಕಲ್ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ಶಿಕ್ಷಣ, ಸಂಶೋಧನೆ, ಆಸ್ಪತ್ರೆಗಳು ಹಾಗೂ ಆರೋಗ್ಯ ಸೇವೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಭಾರತವನ್ನು ಜಾಗತಿಕ ವೈದ್ಯಕೀಯ ಕೇಂದ್ರವನ್ನಾಗಿ ರೂಪಿಸಬಹುದು. ವಿಶ್ವದ ಹಲವು ರಾಷ್ಟ್ರಗಳಲ್ಲಿ ಮಾನವ ಸಂಪನ್ಮೂಲದ ಕೊರತೆ ಇದ್ದು, ಆರೋಗ್ಯ ಕ್ಷೇತ್ರದಲ್ಲಿ ಭಾರತದ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ. ಇದು ಭಾರತದ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದರು.

ಒಂದು ತಿಂಗಳಲ್ಲಿ ಡೀಮ್ಡ್ ವಿವಿ ಸ್ಥಾನಮಾನ?.

ಆಳ್ವಾಸ್ ಸಂಸ್ಥೆಯು ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನಕ್ಕಾಗಿ ಸಲ್ಲಿಸಿರುವ ಪ್ರಸ್ತಾವನೆ ಕುರಿತು ಮಾತನಾಡಿದ ಜೋಶಿ, ಅಗತ್ಯ ದಾಖಲೆಗಳು ಹಾಗೂ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಈ ಕುರಿತು ಒಂದು ತಿಂಗಳೊಳಗೆ ಪತ್ರ ನೀಡುವ ಭರವಸೆ ನೀಡಿದರು.ಆಳ್ವಾಸ್ ಸಂಸ್ಥೆಯು ಶಿಕ್ಷಣದ ವಿವಿಧ ಹಂತಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದರು.

ಭಾರತ ವೈದ್ಯಕೀಯ ಹಬ್ ಆಗಬೇಕು.

ಭಾರತದಲ್ಲಿ ಸಾಕಷ್ಟು ವೈದ್ಯಕೀಯ ಕಾಲೇಜುಗಳು ಹಾಗೂ ಯುವ ವೈದ್ಯರು ಇದ್ದಾರೆ. ಅವರನ್ನು ಉತ್ತಮ ಮಾನವ ಸಂಪನ್ಮೂಲವಾಗಿ ರೂಪಿಸಿದರೆ ಭಾರತ ಜಗತ್ತಿನ ಪ್ರಮುಖ ವೈದ್ಯಕೀಯ ಹಬ್ ಆಗಬಹುದು ಎಂದು ಜೋಶಿ ಹೇಳಿದರು. ಆಳ್ವಾಸ್ ಸಂಸ್ಥೆ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅವಕಾಶಗಳನ್ನು ಅವರು ಶ್ಲಾಘಿಸಿದರು.

ತಂತ್ರಜ್ಞಾನ, ಸ್ಟಾರ್ಟ್‌ಅಪ್‌ಗಳಿಗೆ ಒತ್ತು.

ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತ ಮಹತ್ವದ ಸಾಧನೆ ಮಾಡುತ್ತಿದೆ. ಸ್ಟಾರ್ಟ್‌ಅಪ್‌ಗಳು, ಪೇಟೆಂಟ್‌ಗಳು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ತಂತ್ರಜ್ಞಾನ ಹಾಗೂ ನವೋದ್ಯಮಗಳ ಪ್ರಮುಖ ಕೇಂದ್ರವಾಗಬೇಕು. ಇದಕ್ಕಾಗಿ ಕೌಶಲಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಚಿವರು ಹೇಳಿದರು.

ಡಾ. ಎಂ. ಮೋಹನ ಆಳ್ವ ನೇತೃತ್ವದ ಆಳ್ವಾಸ್ ಸಂಸ್ಥೆಯಂತಹ ಶಿಕ್ಷಣ ಸಂಸ್ಥೆಗಳು ವೈದ್ಯಕೀಯ ಶಿಕ್ಷಣದ ಜತೆಗೆ ಸಂಶೋಧನೆ ಮತ್ತು ನವೋದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು. ಕಾರ್ಯಕ್ರಮದ ತಂತ್ರಜ್ಞಾನ ಪ್ರದರ್ಶನದಲ್ಲಿ 12ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾಗವಹಿಸಿರುವುದು ಯುವಜನರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದರು.

ವಿದೇಶಗಳಿಂದಲೂ ಜನರು ಭಾರತದ ಆರೋಗ್ಯ ಸೇವೆಯ ಮೇಲೆ ವಿಶ್ವಾಸವಿಟ್ಟು ಚಿಕಿತ್ಸೆ ಪಡೆಯಲು ಆಗಮಿಸುತ್ತಿರುವುದು ದೇಶದ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular