ಮಂಗಳೂರು : ಮಾದಕ ವಸ್ತುಗಳ ವಿರುದ್ಧ ಸಮರ ಮುಂದುವರಿಸಿರುವ ಮಂಗಳೂರು ನಗರ ಪೊಲೀಸರು, ನ್ಯಾಯಾಲಯದ ಅನುಮತಿಯೊಂದಿಗೆ ಸುಮಾರು ₹82 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಬುಧವಾರ ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ Ramky Energy and Environment Ltd. ಸಂಸ್ಥೆಯಲ್ಲಿ ವೈಜ್ಞಾನಿಕ ಹಾಗೂ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಿದರು.


ಮಂಗಳೂರು ನಗರದ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 59 ಎನ್ಡಿಪಿಎಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿದ್ದ 450 ಕೆಜಿ ಗಾಂಜಾ, 43.260 ಕೆಜಿ ಎಂಡಿಎಂಎ, 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1.2 ಕೆಜಿ ಭಾಂಗ್ ಅನ್ನು ಡ್ರಗ್ ಡಿಸ್ಪೋಸಲ್ ಕಮಿಟಿ ಸಮಕ್ಷಮ ವಿಲೇವಾರಿ ಮಾಡಲಾಯಿತು.
2026ರ ಜನವರಿಯಿಂದ ಇದುವರೆಗೆ ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ 87 ಎನ್ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 157 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ₹8.18 ಕೋಟಿ ಮೌಲ್ಯದ 148.615 ಕೆಜಿ ಗಾಂಜಾ, 7.165 ಕೆಜಿ ಎಂಡಿಎಂಎ ಹಾಗೂ 1.705 ಕೆಜಿ ಹೈಡ್ರೋ ವೀಡ್ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಅವಧಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ಮಂದಿಯ ವಿರುದ್ಧ 356 ಪ್ರಕರಣಗಳು ದಾಖಲಾಗಿವೆ.
ನಾಶಪಡಿಸಲಾದ ಮಾದಕ ವಸ್ತುಗಳಲ್ಲಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವಶಪಡಿಸಿಕೊಂಡಿದ್ದ ₹75 ಕೋಟಿ ಮೌಲ್ಯದ 37 ಕೆಜಿ ಎಂಡಿಎಂಎ, 2025ರಲ್ಲಿ ಮುಲ್ಕಿ ಠಾಣೆಯ ₹4.47 ಕೋಟಿ ಮೌಲ್ಯದ ಸುಮಾರು 4 ಕೆಜಿ ಎಂಡಿಎಂಎ, ಕೊಣಾಜೆ ಠಾಣೆಯ 106 ಕೆಜಿ ಗಾಂಜಾ ಹಾಗೂ ಮೂಡಬಿದ್ರೆ ಠಾಣೆಯ 111 ಕೆಜಿ ಗಾಂಜಾ ಪ್ರಮುಖವಾಗಿವೆ.
ಮಾದಕ ವಸ್ತುಗಳ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ 112 ಅಥವಾ 9480802321 ಸಂಖ್ಯೆಗೆ ಕರೆ ಮಾಡಿ, ಅಥವಾ ಪೊಲೀಸ್ ಇಲಾಖೆ ಪರಿಚಯಿಸಿರುವ QR ಕೋಡ್ ಮೂಲಕ ಮಾಹಿತಿ ನೀಡುವಂತೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


