ಮಂಗಳೂರು : ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ನಿಯಮಾನುಸಾರ ವಸೂಲಿ ಮಾಡಿ, ಸರ್ಕಾರಕ್ಕೆ ಶೇ.100ರಷ್ಟು ಮರುಜಮೆ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೃತ ಫಲಾನುಭವಿಗಳ ಖಾತೆಗಳಿಗೆ ಎಷ್ಟು ಹಣ ಜಮೆಯಾಗಿದೆ ಹಾಗೂ ಖಾತೆಯಿಂದ ಎಷ್ಟು ಮೊತ್ತವನ್ನು ಡ್ರಾ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಈ ಕುರಿತು ಪ್ರತಿ ತಾಲೂಕಿನಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಾಲೂಕು ಗ್ಯಾರಂಟಿ ಅಧ್ಯಕ್ಷರು ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳ ಜಂಟಿ ಸಭೆ ನಡೆಸಿ, ಹಣ ವಸೂಲಾತಿ ಹಾಗೂ ಸರ್ಕಾರಕ್ಕೆ ಮರುಜಮೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಅದೇ ರೀತಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಚೀಲಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕುಪ್ಪೆಪದವು–ಬಿ.ಸಿ.ರೋಡ್, ಕುಪ್ಪೆಪದವು–ಮೂಡುಬಿದಿರೆ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಬೇಡಿಕೆ : ಸಭೆಯಲ್ಲಿ ಈ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಬೇಡಿಕೆ ಇದ್ದರೂ, ಅಗತ್ಯ ಪರ್ಮಿಟ್ ದೊರೆಯದಿರುವುದರಿಂದ ಬಸ್ ಸಂಚಾರ ಆರಂಭವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೇಡಿಕೆ ಇದ್ದರೂ ಈವರೆಗೆ ಅಗತ್ಯ ಪರ್ಮಿಟ್ ನೀಡಲಾಗಿಲ್ಲ ಎಂದು ತಿಳಿಸಲಾಯಿತು.
ಅರ್ಕುಳ–ಬೊಂಡಂತಿಲದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಆರಂಭಿಸುವ ಕುರಿತ ಪ್ರಸ್ತಾವನೆಯೂ ಸಭೆಯಲ್ಲಿ ಚರ್ಚೆಯಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, 1,000ಕ್ಕೂ ಹೆಚ್ಚು ಕಾರ್ಡ್‌ಗಳಿರುವ ಪ್ರದೇಶ ಹಾಗೂ ಅದರಲ್ಲಿ ಎಸ್‌ಸಿ/ಎಸ್‌ಟಿ ಶೇ.40ರಷ್ಟು ಜನಸಂಖ್ಯೆ ಇರುವ ಕುರಿತು ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಜೋಕಿಂ ಡಿಸೋಜಾ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್ ಸೇರಿದಂತೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

