ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸ್ಥಾಪನಾಚಾರ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಭಕ್ತಿಭಾವದಿಂದ ನಡೆಯಿತು.
ಬೆಳಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿದ್ದು, 9 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಭಿಷೇಕ ನೆರವೇರಿಸಲಾಯಿತು. ಬಳಿಕ ಕಲಶ ಪ್ರತಿಷ್ಠಾಪನೆ ಹಾಗೂ ವರಮಹಾಲಕ್ಷ್ಮೀ ಪೂಜೆ ನಡೆಯಿತು.
ವರಮಹಾಲಕ್ಷ್ಮೀ ಪೂಜೆ ಹಾಗೂ ನಾರಾಯಣ ಗುರುಗಳ ಜನ್ಮದಿನ ಒಂದೇ ದಿನ ಬಂದಿರುವುದು ಅಪರೂಪವಾಗಿದ್ದು, ಈ ದಿನ ವಿಶೇಷವಾಗಿದೆ. ನೂರಾರು ಮಹಿಳೆಯರು ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿದರು.
ವಿಶ್ವ ಬಿಲ್ಲವ ಮಹಿಳಾ ಸಂಘದ ಸಂಸ್ಥಾಪಕಿ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್ ಮಾತನಾಡಿ, “ವರಮಹಾಲಕ್ಷ್ಮೀ ಪೂಜೆ ಮಹಿಳೆಯರು ನೆರವೇರಿಸುವ ವಿಶೇಷ ಪೂಜೆಯಾಗಿದೆ. ಕಳೆದ 21 ವರ್ಷಗಳಿಂದ ದೇವಳದಲ್ಲಿ ನಿರಂತರವಾಗಿ ಈ ಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಮಹಿಳಾ ಮಂಡಳಿಯ ಸರ್ವ ಮಹಿಳೆಯರು ಸೇರಿ ಪೂಜೆಯನ್ನು ನೆರವೇರಿಸಿದ್ದೇವೆ” ಎಂದರು.
ಗೋಕರ್ಣನಾಥ ದೇವಳದ ಮಾಜಿ ಟ್ರಸ್ಟಿ ರವಿಶಂಕರ್ ಮಿಜಾರ್ ಮಾತನಾಡಿ, ನಾರಾಯಣ ಗುರುಗಳ ಜನ್ಮದಿನೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜೆ ಒಂದೇ ದಿನ ಬಂದಿರುವುದು ವಿಶೇಷ. ನೂರಾರು ಮಹಿಳೆಯರ ಭಾಗವಹಿಸುವಿಕೆಯಿಂದ ಪೂಜೆಗಳು ಭಕ್ತಿಭಾವದಿಂದ ನೆರವೇರಿವೆ ಎಂದು ಶುಭ ಹಾರೈಸಿದರು.
ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿ ಹಾಗೂ ಮಾಜಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಟ್ರಸ್ಟಿ ಜಗದೀಪ್ ಡಿ. ಸುವರ್ಣ ಸೇರಿದಂತೆ ಕ್ಷೇತ್ರಾಡಳಿತ ಮಂಡಳಿ ಸದಸ್ಯರು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರಮಹಾಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಮಹಿಳೆಯರು ಸೇರಿದಂತೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು.

