Friday, August 28, 2026
Homeಜಿಲ್ಲೆಮಂಗಳೂರು : ‘ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತಿನಿ, ಕೊಲ್ಲದೇ ಬಿಡುವುದಿಲ್ಲ’ದೌರ್ಜನ್ಯ ಪ್ರಶ್ನಿಸಿ ಪೊಲೀಸ್ ದೂರು...

ಮಂಗಳೂರು : ‘ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತಿನಿ, ಕೊಲ್ಲದೇ ಬಿಡುವುದಿಲ್ಲ’ದೌರ್ಜನ್ಯ ಪ್ರಶ್ನಿಸಿ ಪೊಲೀಸ್ ದೂರು ನೀಡಿದ ಯುವತಿಗೆ ಕೊಲೆ ಬೆದರಿಕೆ ಆರೋಪ.

ಮಂಗಳೂರು : ದೌರ್ಜನ್ಯ ಪ್ರಶ್ನಿಸಿ ಪೊಲೀಸ್ ದೂರು ನೀಡಿದ್ದ ಯುವತಿಗೆ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸ್ಟಾಫ್ ನರ್ಸ್ ಆಗಿದ್ದ ನಂದಿನಿ ಎಂಬ ಯುವತಿಗೆ ನೌಶಾದ್ ಎಂಬಾತ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

ಪುತ್ತೂರು ನಿವಾಸಿಯಾಗಿರುವ ನಂದಿನಿ ಮಂಗಳೂರಿನ ನೀರುಮಾರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಗಸ್ಟ್ 16ರಂದು ಮೈಸೂರಿಗೆ ತೆರಳುವ ಸಂದರ್ಭ ಮನೆಯ ಕೀಯನ್ನು ಮತ್ತೊಬ್ಬ ನರ್ಸ್ ಚಂದನಾಗೆ ನೀಡಿದ್ದರು. ಮನೆಯಲ್ಲಿದ್ದ ನಾಯಿಗೆ ಊಟ ಹಾಕುವ ಸಲುವಾಗಿ ಕೀ ನೀಡಲಾಗಿತ್ತು ಎನ್ನಲಾಗಿದೆ.
ಆಗಸ್ಟ್ 17ರಂದು ಚಂದನಾ ಮತ್ತೊಬ್ಬ ನರ್ಸ್ ಆದಿತ್ಯಾ ಜೊತೆ ನಂದಿನಿಯ ಬಾಡಿಗೆ ಮನೆಗೆ ತೆರಳಿದ್ದರು. ಈ ವೇಳೆ ಆದಿತ್ಯಾ ನೀಡಿದ ಮಾಹಿತಿಯ ಆಧಾರದ ಮೇಲೆ ನೌಶಾದ್ ಅಲ್ಲಿಗೆ ಬಂದಿದ್ದು, ಗಲಾಟೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ನಂದಿನಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಮನೆಗೆ ಪ್ರವೇಶಿಸಿ ಚಂದನಾ ಹಾಗೂ ಆದಿತ್ಯಾಗೆ ಅಶ್ಲೀಲವಾಗಿ ನಿಂದಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ವಿಷಯ ತಿಳಿದ ಬಳಿಕ ನಂದಿನಿ ಆದಿತ್ಯಾಗೆ ಕರೆ ಮಾಡಿದಾಗ, ಆಕೆಯ ಮೊಬೈಲ್ ಫೋನ್ ಅನ್ನು ನೌಶಾದ್ ಸ್ವೀಕರಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ನಂದಿನಿಗೆ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನಂದಿನಿ ನೌಶಾದ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡಿರುವ ವಿಚಾರ ತಿಳಿದ ಬಳಿಕ ನೌಶಾದ್ ವಾಟ್ಸಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿ ಮತ್ತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

‘ನನಗೆ ಹೆದರಿಕೆ ಇಲ್ಲ. ಪೊಲೀಸರಿಗೆ ಶರಣಾಗೋದಕ್ಕಿಂತ ಮುಂಚೆ ನಿನ್ನ ತಲೆ ತೆಗೀತಿನಿ, ಕೊಲ್ಲದೇ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ನಂದಿನಿ ಆರೋಪಿಸಿದ್ದಾರೆ. ಬೆದರಿಕೆಯಿಂದ ಆತಂಕಗೊಂಡ ನಂದಿನಿ ಆಗಸ್ಟ್ 20ರಂದು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ದೂರು ನೀಡಿದರೂ ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಂಡಿಲ್ಲ ಎಂದು ನಂದಿನಿ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಕ್ಷಣೆಗೆ ವಿಶ್ವ ಹಿಂದೂ ಪರಿಷತ್‌ (VHP) ಮುಖಂಡರ ಮೊರೆ ಹೋಗಿದ್ದಾಗಿ ನಂದಿನಿ ತಿಳಿಸಿದ್ದಾರೆ. ಬಳಿಕ ನಂದಿನಿ ವಿಎಚ್‌ಪಿ ಮೊರೆ ಹೋದ ಬೆನ್ನಲ್ಲೇ ಆರೋಪಿ ನೌಶಾದ್ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ಹಾಗೂ ದೂರುದಾರರ ಆರೋಪಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular