Friday, August 28, 2026
Homeಜಿಲ್ಲೆಮಂಗಳೂರು : “ಲೆಕ್ಕ ಕೇಳಿದರೆ ಕೈಕಾಲು ಕಡಿಯುವ ಬೆದರಿಕೆ” — ಚೀರುಂಭಾ ಭಗವತಿ ತೀಯಾ ಸಮಾಜ...

ಮಂಗಳೂರು : “ಲೆಕ್ಕ ಕೇಳಿದರೆ ಕೈಕಾಲು ಕಡಿಯುವ ಬೆದರಿಕೆ” — ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದ ವಿರುದ್ಧ ಸದಸ್ಯನ ಆರೋಪ.

ಮಂಗಳೂರು: ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘ (ರಿ.)ದ ಆಡಳಿತ, ಹಣಕಾಸು ವ್ಯವಹಾರ, ಲೆಕ್ಕಪತ್ರ ಹಾಗೂ ಸಂಘದ ಉಪನಿಬಂಧನೆಗಳ ಪಾಲನೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ ಎಂದು ಕಾರ್ಯಕಾರಿ ಸಮಿತಿ ಸದಸ್ಯ ಪವನ್ ರಾಜ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಮತ್ತು ಕಾರ್ಯಕಾರಿ ಸಮಿತಿಯ ಮುಂದೆ ಸಂಪೂರ್ಣ ಲೆಕ್ಕಪತ್ರಗಳನ್ನು ಮಂಡಿಸಬೇಕು ಎಂಬುದು ತಮ್ಮ ಆಗ್ರಹವಾಗಿದೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷರ ಆಯ್ಕೆ ಕುರಿತು ಆಕ್ಷೇಪ
ಹಿಂದಿನ ಮಹಾಸಭೆಯಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ ನಗರ ಹಾಗೂ ಸಂಘದ ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆದರೆ ಅಧಿಕಾರ ಹಸ್ತಾಂತರವಾದ ಸುಮಾರು 15 ದಿನಗಳಲ್ಲೇ ವೈಯಕ್ತಿಕ ಕಾರಣ ನೀಡಿ ಉಮೇಶ್ ಬೆಂಜನಪದವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಪವನ್ ರಾಜ್ ಹೇಳಿದ್ದಾರೆ.
ಅದಾದ ಬಳಿಕ ಹೊಸ ಮಹಾಸಭೆ ಕರೆಯದೆ ಮಾಸಿಕ ಸಭೆಯಲ್ಲಿ ಚಿದಾನಂದ ಗುರಿಕಾರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಪ್ರಕ್ರಿಯೆ ಕುರಿತು ಕಾರ್ಯಕಾರಿ ಸಮಿತಿಯೊಳಗೆ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ಸಭಾಂಗಣದ ಸಾಲ–ಲೆಕ್ಕಪತ್ರದ ಬಗ್ಗೆ ಪ್ರಶ್ನೆ
ಮಾಜಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅವರ ಅವಧಿಯಲ್ಲಿ ನೂತನ ಸಭಾಂಗಣ ನಿರ್ಮಾಣಕ್ಕೆ ಅವರ ಕುಟುಂಬಕ್ಕೆ ಸೇರಿದ ಜಮೀನನ್ನು ಭಗವತಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸುಮಾರು ₹30 ಲಕ್ಷ ಸಾಲ ಪಡೆಯಲಾಗಿತ್ತು ಎಂದು ಸಭೆಗಳಲ್ಲಿ ತಿಳಿಸಲಾಗಿತ್ತು ಎಂದು ಪವನ್ ರಾಜ್ ಹೇಳಿದ್ದಾರೆ.
ಸಭಾಂಗಣದಿಂದ ತಿಂಗಳಿಗೆ ಸುಮಾರು ₹1 ಲಕ್ಷ ಬಾಡಿಗೆ ಆದಾಯ ಬರುವ ವ್ಯವಸ್ಥೆ ರೂಪಿಸಿ, ಅದರಿಂದ ಬ್ಯಾಂಕ್ ಸಾಲದ ಕಂತುಗಳನ್ನು ಪಾವತಿಸಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಸಾಲವನ್ನು ತೀರಿಸಿ ಅಡಮಾನದಲ್ಲಿರುವ ದಾಖಲೆಗಳನ್ನು ಹಿಂದಿರುಗಿಸುವಂತೆ ಮನವಿ ಮಾಡಲಾಗಿತ್ತು. ಬಳಿಕ ಬ್ಯಾಂಕ್ ಸಾಲ ಹಾಗೂ ಇತರ ಬಾಕಿಗಳನ್ನು ಸೇರಿಸಿ ಸುಮಾರು ₹36 ಲಕ್ಷ ಬಾಧ್ಯತೆ ಇದೆ ಎಂದು ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ಈ ಕುರಿತು ಸಂಪೂರ್ಣ ಲೆಕ್ಕಪತ್ರಗಳನ್ನು ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಲಾಗಿಲ್ಲ ಎಂಬುದು ಅವರ ಆರೋಪ.

ಹಲವು ಕಾರ್ಯಕ್ರಮಗಳ ಆದಾಯ–ವೆಚ್ಚದ ಲೆಕ್ಕ ಕೇಳಿದ ಸದಸ್ಯರು.

ನೂತನ ಆಡಳಿತದ ಅವಧಿಯಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಹಣಕಾಸು ವ್ಯವಹಾರಗಳ ಕುರಿತೂ ಪವನ್ ರಾಜ್ ಪ್ರಶ್ನೆ ಎತ್ತಿದ್ದಾರೆ.
ಸಭೆಗಳಲ್ಲಿ ತಿಳಿಸಲಾದ ಮಾಹಿತಿಯಂತೆ, ಭರಣಿ ಮಹೋತ್ಸವದಲ್ಲಿ ಸುಮಾರು ₹14 ಲಕ್ಷ ಉಳಿತಾಯ, ಊರುಸು ಕಾರ್ಯಕ್ರಮಕ್ಕೆ ಅಂಗಳ ಬಾಡಿಗೆ ರೂಪದಲ್ಲಿ ಸುಮಾರು ₹11 ಲಕ್ಷ, ಹಳೆಯ ಜಾಗದ ದಾಖಲೆಗಳಿಗೆ ಸಹಿ ಹಾಕಿದ ಸಂಬಂಧ ಸುಮಾರು ₹6 ಲಕ್ಷ ಹಾಗೂ ಸಭಾಂಗಣಕ್ಕೆ ಹೆಚ್ಚುವರಿ ಮುಂಗಡವಾಗಿ ಸುಮಾರು ₹10 ಲಕ್ಷ ಸ್ವೀಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ 2025ರಲ್ಲಿ ನಡೆದ ‘ತೀಯೆರೆ ಚೇರಿಲಿ ಒರಿ ನಾಳ್’ ಕಾರ್ಯಕ್ರಮದ ಸಂಪೂರ್ಣ ಆದಾಯ–ವೆಚ್ಚದ ಲೆಕ್ಕವನ್ನು ಇದುವರೆಗೂ ಕಾರ್ಯಕಾರಿ ಸಮಿತಿಯ ಮುಂದೆ ಮಂಡಿಸಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಮಹಾದ್ವಾರ ನಿರ್ಮಾಣದ ವೆಚ್ಚದ ಬಗ್ಗೆಯೂ ಪ್ರಶ್ನೆ
ದಾನಿಗಳ ಸಹಕಾರದಿಂದ ನಿರ್ಮಿಸಲಾದ ಮಹಾದ್ವಾರದ ನಕ್ಷೆ, ವಿನ್ಯಾಸ, ಗುತ್ತಿಗೆದಾರರ ಆಯ್ಕೆ ಮತ್ತು ನಿರ್ಮಾಣ ವೆಚ್ಚದ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ಸಮಗ್ರ ಚರ್ಚೆ ನಡೆದಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಆರಂಭದಲ್ಲಿ ಸುಮಾರು ₹25 ಲಕ್ಷ ದೇಣಿಗೆ ಸಂಗ್ರಹಿಸಿ ಕಡಿಮೆ ವೆಚ್ಚದಲ್ಲಿ ದ್ವಾರ ನಿರ್ಮಿಸಿ ಸಂಘಕ್ಕೆ ಉಳಿತಾಯ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಬಳಿಕ ನಿರ್ಮಾಣ ವೆಚ್ಚ ಸುಮಾರು ₹33 ಲಕ್ಷ ಎಂದು ಹೇಳಲಾಯಿತು. ದಾನಿಗಳಿಂದ ಸುಮಾರು ₹28 ಲಕ್ಷ ಸಂಗ್ರಹಿಸಲಾಗಿದ್ದು, ಸಂಘದಿಂದ ಸುಮಾರು ₹1.80 ಲಕ್ಷ ಬಳಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ. ಆದರೆ ಸಂಪೂರ್ಣ ಆದಾಯ–ವೆಚ್ಚದ ಲೆಕ್ಕ ಕೇಳಿದಾಗ ಸಮರ್ಪಕ ದಾಖಲೆ ನೀಡಲಾಗಿಲ್ಲ ಎಂದು ಪವನ್ ರಾಜ್ ಆರೋಪಿಸಿದ್ದಾರೆ.

ಜಿಲ್ಲಾ ಉಪನೋಂದಣಾಧಿಕಾರಿಗಳಿಗೆ ದೂರು
ಸಂಘದ ಆಡಳಿತ, ಲೆಕ್ಕಪತ್ರ ಹಾಗೂ ಉಪನಿಬಂಧನೆಗಳ ಪಾಲನೆ ಕುರಿತು ಕೆಲವು ಸಮಾನಮನಸ್ಕ ಸದಸ್ಯರೊಂದಿಗೆ 19-06-2026ರಂದು ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಮನವಿ/ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಲೆಕ್ಕಪತ್ರ ಮತ್ತು ಸಂಬಂಧಿತ ದಾಖಲೆಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಿಂದ ನೋಟಿಸ್ ನೀಡಲಾಗಿದೆ ಎಂದು ಪವನ್ ರಾಜ್ ಹೇಳಿದ್ದಾರೆ.
ತಾವು ಈ ವಿಚಾರವನ್ನು ಸಾರ್ವಜನಿಕಗೊಳಿಸದೆ ಮೊದಲು ಸಂಘದ ಒಳಗೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾಗಿ ಅವರು ತಿಳಿಸಿದ್ದಾರೆ.

ದೇವಸ್ಥಾನದ ವಿರುದ್ಧ ದೂರು ನೀಡಿಲ್ಲ: ಸ್ಪಷ್ಟನೆ
ತಾವು ಧಾರ್ಮಿಕ ದತ್ತಿ ಇಲಾಖೆಗೆ ದೇವಸ್ಥಾನ ಅಥವಾ ಕ್ಷೇತ್ರದ ವಿರುದ್ಧ ಯಾವುದೇ ದೂರು ನೀಡಿಲ್ಲ. ತಮ್ಮ ದೂರು ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದ ಆಡಳಿತ, ಲೆಕ್ಕಪತ್ರ ಹಾಗೂ ಉಪನಿಬಂಧನೆಗಳ ಪಾಲನೆಗೆ ಮಾತ್ರ ಸಂಬಂಧಿಸಿದೆ ಎಂದು ಪವನ್ ರಾಜ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಿಂದ ಬಂದ ಪತ್ರವನ್ನು ಕೆಲವರು ವಾಟ್ಸ್‌ಆ್ಯಪ್ ಮೂಲಕ ಹಂಚಿಕೊಂಡು, ದೇವಸ್ಥಾನದ ವಿರುದ್ಧ ದೂರು ನೀಡಲಾಗಿದೆ ಎಂಬ ತಪ್ಪು ಕಲ್ಪನೆ ಮೂಡಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಬೆದರಿಕೆ ಆರೋಪ
ಲೆಕ್ಕಪತ್ರಗಳ ಕುರಿತು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ದೂರವಾಣಿ ಮೂಲಕ ಒತ್ತಡ ಹಾಗೂ ಬೆದರಿಕೆಯ ಮಾತುಗಳು ಬಂದಿವೆ ಎಂದು ಪವನ್ ರಾಜ್ ಆರೋಪಿಸಿದ್ದಾರೆ.
ತಮಗೆ “ಕೈಕಾಲು ಕಡಿಯುವುದಾಗಿ” ಬೆದರಿಕೆ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದು, ದಾಖಲೆಗಳನ್ನು ಸಲ್ಲಿಸಿದ್ದರೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದರ ಜೊತೆಗೆ, ತಮ್ಮನ್ನು ಬೆದರಿಸಿರುವುದಾಗಿ ಹೇಳಲಾಗುವ ಆಡಿಯೋ ತುಣುಕುಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಸಮಸ್ಯೆ ಸಂಘದೊಳಗೇ ಪರಿಹಾರವಾಗಲಿ”
ಸಂಘದ ವಿರುದ್ಧ ಅಥವಾ ದೇವಸ್ಥಾನದ ವಿರುದ್ಧ ಯಾವುದೇ ವೈಯಕ್ತಿಕ ವಿರೋಧವಿಲ್ಲ. ಸಂಘವು ತನ್ನ ಬೈಲಾ ಮತ್ತು ಉಪನಿಬಂಧನೆಗಳ ಪ್ರಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ತಮ್ಮ ಆಗ್ರಹ ಎಂದು ಪವನ್ ರಾಜ್ ಹೇಳಿದ್ದಾರೆ.

“ಇದು ನಮ್ಮದೇ ಸಂಘ, ನಮ್ಮದೇ ಸಮಾಜ. ಹಿಂದಿನದು ಏನೇ ಇರಲಿ, ಮುಂದಾದರೂ ಎಲ್ಲರೂ ಒಟ್ಟಾಗಿ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ಮುನ್ನಡೆಯಬೇಕು” ಎಂಬ ನಿಲುವಿನಲ್ಲಿ ತಾವು ಇದ್ದೇವೆ ಎಂದು ಅವರು ತಿಳಿಸಿದ್ದಾರೆ.

ಮಹಾಸಭೆ ಕರೆಯುವಂತೆ ಆಗ್ರಹ
ಸಂಘದ ಬೈಲಾ ಪ್ರಕಾರ ನಿಗದಿತ ಅವಧಿಯಲ್ಲಿ ಮಹಾಸಭೆ ಕರೆಯಬೇಕು ಎಂದು ಪ್ರಶ್ನಿಸಿದಾಗ, ಐದು ವರ್ಷ ಆಡಳಿತ ಮುಂದುವರಿಸುವುದಾಗಿ ಕ್ಷೇತ್ರದ ಆಡಳಿತ ಮೊಕ್ತೇಸರರಿಂದ ಉತ್ತರ ದೊರೆತಿದೆ ಎಂದು ಪವನ್ ರಾಜ್ ಹೇಳಿದ್ದಾರೆ.
“ಅಧಿಕಾರದಲ್ಲಿ ಇರಬಾರದು ಎಂದು ನಾವು ಹೇಳುತ್ತಿಲ್ಲ. ನಿಯಮಾನುಸಾರ ಮಹಾಸಭೆ ಕರೆಯಿರಿ. ಮತ್ತೆ ಇದೇ ಆಡಳಿತ ಆಯ್ಕೆಯಾದರೂ ನಮಗೆ ಅಭ್ಯಂತರವಿಲ್ಲ. ಆದರೆ ಸಂಘದ ಲೆಕ್ಕಪತ್ರಗಳನ್ನು ಸರಿಪಡಿಸಿ ಸದಸ್ಯರ ಮುಂದೆ ಮಂಡಿಸಬೇಕು” ಎಂದು ಅವರು ಹೇಳಿದ್ದಾರೆ.

ಸಮಾಜದ ಹಿರಿಯರ ಮಧ್ಯಸ್ಥಿಕೆಗೆ ಒತ್ತಾಯ
ಸಮಾಜದೊಳಗಿನ ಸಮಸ್ಯೆಗಳನ್ನು ಮೊದಲು ತೀಯಾ ಸಮಾಜದ ಹಿರಿಯರು ಹಾಗೂ ಗೌರವಾನ್ವಿತ ನಾಯಕರ ಸಮ್ಮುಖದಲ್ಲಿ ಚರ್ಚಿಸಿ ಪರಿಹರಿಸಬಹುದಾಗಿತ್ತು. ಆದರೆ ಹೊರಗಿನವರ ಮಧ್ಯಸ್ಥಿಕೆ ಅಥವಾ ಸಹಾಯ ಪಡೆಯಲಾಗಿದೆ ಎಂಬ ಅಸಮಾಧಾನ ಸಮಾಜದೊಳಗೆ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ‘ತೀಯೆರೆ ಚೇರಿಲಿ ಒರಿ ನಾಳ್’ ಕಾರ್ಯಕ್ರಮದ ವೇಳೆ ತಮ್ಮೊಂದಿಗೆ ನಡೆದ ಘಟನೆಯ ಕುರಿತು ಕೂಡ ಪವನ್ ರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಾಜದ ವೇದಿಕೆಯಲ್ಲಿ ಸದಸ್ಯರ ಗೌರವಕ್ಕೆ ಧಕ್ಕೆ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಅವರು ಹೇಳಿದ್ದಾರೆ.

ವ್ಯಕ್ತಿಯ ವಿರುದ್ಧವಲ್ಲ, ಪಾರದರ್ಶಕತೆಗಾಗಿ”
“ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ. ಸಂಘವು ಬೈಲಾ ಪ್ರಕಾರ ನಡೆಯಬೇಕು. ಲೆಕ್ಕಪತ್ರಕ್ಕೆ ಲೆಕ್ಕ ಇರಬೇಕು. ಆಡಳಿತಕ್ಕೆ ನಿಯಮ ಇರಬೇಕು. ಸದಸ್ಯರ ಪ್ರಶ್ನೆಗೆ ದಾಖಲೆಸಹಿತ ಉತ್ತರ ನೀಡಬೇಕು. ಸಮಾಜದ ವೇದಿಕೆಗೆ ಗೌರವ ಇರಬೇಕು ಮತ್ತು ಸಮಾಜದ ಏಕತೆ ಉಳಿಯಬೇಕು” ಎಂದು ಪವನ್ ರಾಜ್ ಹೇಳಿದ್ದಾರೆ.

ಸಂಘಕ್ಕೆ ಸಂಬಂಧಿಸಿದ ಎಲ್ಲಾ ಆದಾಯ–ವೆಚ್ಚದ ವಿವರಗಳು, ದಾಖಲೆಗಳು ಹಾಗೂ ಆಡಳಿತಾತ್ಮಕ ನಿರ್ಣಯಗಳನ್ನು ಕಾರ್ಯಕಾರಿ ಸಮಿತಿ ಮತ್ತು ಸದಸ್ಯರ ಮುಂದೆ ಪಾರದರ್ಶಕವಾಗಿ ಮಂಡಿಸಿದರೆ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular