ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದಲ್ಲಿ ತಂತ್ರಜ್ಞಾನದ ಬಳಕೆಗೆ ಮತ್ತೊಂದು ಹೆಜ್ಜೆ ಇಡಲಾಗುತ್ತಿದೆ. ಇನ್ನು ಮುಂದೆ ಕಂಬಳ ಸ್ಪರ್ಧೆಯಲ್ಲಿ ಕೋಣಗಳ ಓಟದ ಅಂತಿಮ ಸಮಯವನ್ನು ಲೈವ್ ಆಗಿ ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿ ಪ್ರದರ್ಶಿಸುವ ಹೊಸ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ.
ಈಗಾಗಲೇ ಕಂಬಳದಲ್ಲಿ ಸೆಕೆಂಡಿನ ನೂರನೇ ಒಂದರಷ್ಟು ನಿಖರತೆಯಲ್ಲಿ ಕೋಣಗಳ ಓಟದ ಸಮಯ ದಾಖಲಿಸಿbಫಲಿತಾಂಶ ಪ್ರಕಟಿಸಲಾಗುತ್ತಿದೆ. ಆದರೆ, ಈ ಸಮಯವನ್ನು ಸ್ಪರ್ಧೆಯ ವೇಳೆ ಪ್ರೇಕ್ಷಕರು ಹಾಗೂ ಕಂಬಳದ ಎಲ್ಲ ಭಾಗಗಳಿಂದಲೂ ಸ್ಪಷ್ಟವಾಗಿ ವೀಕ್ಷಿಸುವ ವ್ಯವಸ್ಥೆ ಇರಲಿಲ್ಲ.
ಹೊಸ ಮಾದರಿಯ ವ್ಯವಸ್ಥೆ ಜಾರಿಗೆ ಬಂದರೆ, ಮಂಜೊಟ್ಟಿ ಸಮೀಪ ಸೇರಿದಂತೆ ಕಂಬಳದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುವ ದೊಡ್ಡ ಸ್ಕ್ರೀನ್‌ನಲ್ಲಿ ಓಡಿದ ಕೋಣಗಳ ಹೆಸರು, ಯಜಮಾನರು, ಓಟಗಾರರು ಹಾಗೂ ದಾಖಲಾದ ಸಮಯ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ತಕ್ಷಣವೇ ಪ್ರದರ್ಶಿಸಲು ಸಾಧ್ಯವಾಗಲಿದೆ.
ಸಾಫ್ಟ್‌ವೇರ್ ಮೂಲಕ ಸಂಪೂರ್ಣ ಮಾಹಿತಿ ಕಂಬಳ ಕೋಣಗಳ ಯಜಮಾನರು, ಓಟಗಾರರು, ಕೋಣಗಳ ಹೆಸರು, ವಿವಿಧ ಸುತ್ತುಗಳಲ್ಲಿ ದಾಖಲಾದ ಸಮಯ ಹಾಗೂ ಫಲಿತಾಂಶ ಸೇರಿದಂತೆ ಅಗತ್ಯ ಮಾಹಿತಿಯನ್ನು ಒಳಗೊಂಡ ಸಾಫ್ಟ್‌ವೇರ್ ಅನ್ನು ಆದಿತ್ಯ ಕರ್ಕೇರ ಅವರು ರೂಪಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಕಂಬಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಲೈವ್ ಸ್ಕೋರ್ರ್ಡ್ ಬೋರ್ಡ್ ಹಾಗೂ ಟೈಮಿಂಗ್ಸ್ ಡಿಸ್‌ಪ್ಲೇ ವ್ಯವಸ್ಥೆಯ ಮಾದರಿಯನ್ನು ಅನಾವರಣಗೊಳಿಸಲಾಗಿದೆ.
ಕಂಬಳ ಟೈಮಿಂಗ್ಸ್ ತಂತ್ರಜ್ಞಾನದ ಬೆಳವಣಿಗೆ ಕಂಬಳದಲ್ಲಿ ಆರಂಭದಲ್ಲಿ ಕೋಣಗಳು ಮಂಜೊಟ್ಟಿಗೆ ಮೊದಲು ಕಾಲಿಟ್ಟಿರುವುದನ್ನು ಕಣ್ಣಂದಾಜಿನ ಮೂಲಕ ನಿರ್ಧರಿಸಲಾಗುತ್ತಿತ್ತು. ಬಳಿಕ ಸ್ಟಾಪ್‌ವಾಚ್ ಬಳಕೆಗೆ ಬಂದು ಸಮಯ ದಾಖಲಿಸುವ ವ್ಯವಸ್ಥೆ ಆರಂಭವಾಯಿತು.
ಮುಂದೆ ವೀಡಿಯೋ ರೆಕಾರ್ಡಿಂಗ್ ಮೂಲಕ ಫಿನಿಶಿಂಗ್ ಪರಿಶೀಲಿಸುವ ವ್ಯವಸ್ಥೆ ಬಂತು. ತಂತ್ರಜ್ಞಾನ ಅಭಿವೃದ್ಧಿಯಾದಂತೆ ಫಿನಿಶ್‌ಲೈನ್ ಸೆನ್ಸಾರ್‌ಗಳು ಅಳವಡಿಸಲಾಯಿತು. ಆರಂಭ ಮತ್ತು ಅಂತ್ಯ ಎರಡನ್ನೂ ಸೆನ್ಸಾರ್ ಆಧಾರಿತವಾಗಿ ದಾಖಲಿಸುವ ಮೂಲಕ 0.01 ಸೆಕೆಂಡ್‌ಗಳ ನಿಖರತೆಯಲ್ಲಿ ಫಲಿತಾಂಶ ನಿರ್ಧರಿಸುವ ವ್ಯವಸ್ಥೆ ಜಾರಿಗೆ ಬಂತು. 2024ರಲ್ಲಿ ಆಟೋಮೇಟೆಡ್ ಟೈಮ್ ಗೇಟ್ ಹಾಗೂ ಫೋಟೋ ಫಿನಿಶ್ ರಿಸಲ್ಟ್ ಸಿಸ್ಟಮ್ ಅಳವಡಿಸಲಾಗಿತ್ತು.
ಮಿಯಾರು ಕುದಿ ಕಂಬಳದಲ್ಲಿಯೂ ಫೋಟೋ ಫಿನಿಶ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬಳಸಲಾಗಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಓಟದ ಸಮಯವನ್ನು ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ನಲ್ಲಿ ಲೈವ್ ಆಗಿ ಪ್ರದರ್ಶಿಸುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇದು ಕಂಬಳ ಕ್ರೀಡೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದರ ಜೊತೆಗೆ ಪ್ರೇಕ್ಷಕರ ಅನುಭವಕ್ಕೂ ಹೊಸ ಆಯಾಮ ನೀಡುವ ನಿರೀಕ್ಷೆ ಮೂಡಿಸಿದೆ.

