ಹಾವೇರಿ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿಯ ನಿಸರ್ಗ ಡಾಬಾ ಮುಂಭಾಗ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದಿದೆ.

ರಾಣೇಬೆನ್ನೂರಿನಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸಿದ್ದಾರ್ಥ್ (27), ಹಸನ್ಮುಖಿ (29) ಹಾಗೂ ಯಶೋಧಾಬಾಯಿ (51) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಸೌಂದರ್ಯ (26), ಸಿಂಧು (24) ಹಾಗೂ ಒಂದು ವರ್ಷದ ಮಗು ಕಶ್ವಶ್ರೀ ಗಾಯಗೊಂಡಿದ್ದು, ಅವರನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಹಾಗೂ ಗಾಯಾಳುಗಳು ದಾವಣಗೆರೆಯ ನಿಟವಳ್ಳಿ ಮೌನೇಶ್ವರ ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

