ಮಂಗಳೂರು : ನಗರದ ಕುಂಟಿಕಾನ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಆನ್‌ಲೈನ್ ಡೆಲಿವರಿ ಸಂಸ್ಥೆಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಲಿಫ್ಟ್ ದುರಂತದಲ್ಲಿ ಯುವ ಉದ್ಯೋಗಿಯೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ.

ಆನ್‌ಲೈನ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನೌಫಾಲ್, ಕರ್ತವ್ಯದ ನಿಮಿತ್ತ ಕಟ್ಟಡದ ಮೇಲ್ಮಹಡಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಲಿಫ್ಟ್ ಮೂಲಕ ಮೇಲ್ಮಹಡಿಗೆ ತೆರಳುತ್ತಿದ್ದಾಗ ತಾಂತ್ರಿಕ ದೋಷದಿಂದ ಲಿಫ್ಟ್ ನೆಲಮಹಡಿ ಮತ್ತು ಮೊದಲ ಮಹಡಿ ನಡುವಿನ ಭಾಗದಲ್ಲಿ ಏಕಾಏಕಿ ಸ್ಥಗಿತಗೊಂಡಿದೆ. ಲಿಫ್ಟ್ ಒಳಗೆ ಸಿಲುಕಿದ್ದ ನೌಫಾಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ತಕ್ಷಣ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಸಹೋದ್ಯೋಗಿಗಳು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ಲಿಫ್ಟ್‌ನ ಒಂದು ಭಾಗ ಮೊದಲ ಮಹಡಿಗೆ ಸಮೀಪದಲ್ಲಿದ್ದ ಹಿನ್ನೆಲೆ, ಸಿಬ್ಬಂದಿ ಬಾಗಿಲು ತೆರೆಯಲು ಪ್ರಯತ್ನಿಸಿ ನೌಫಾಲ್ ಅವರನ್ನು ಮೇಲಕ್ಕೆ ಎಳೆಯಲು ಮುಂದಾಗಿದ್ದರು. ಇದೇ ವೇಳೆ ಲಿಫ್ಟ್ ಏಕಾಏಕಿ ಮರುಚಲನೆಗೊಂಡ ಪರಿಣಾಮ ಅವರು ಗಂಭೀರವಾಗಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡ ನೌಫಾಲ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿತ್ತೇ ಅಥವಾ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯ ವಹಿಸಲಾಗಿತ್ತೇ ಎಂಬ ಕುರಿತು ತನಿಖೆ ಆರಂಭಿಸಲಾಗಿದೆ.


