ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಕುಟುಕು ಕಾರ್ಯಾಚರಣೆ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಅವರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರ ನೋಟಿಸ್ಗಾಗಿ ಕಾಯದೆ ತನಿಖಾಧಿಕಾರಿಯನ್ನು ಸಂಪರ್ಕಿಸಿ ವಿಚಾರಣೆಗೆ ಹಾಜರಾದ ಕೃಪಾ ಆಳ್ವ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
“ಕುಟುಕು ಕಾರ್ಯಾಚರಣೆ ಎಂದು ಗೊತ್ತಿರಲಿಲ್ಲ” ಎಂದ ಕೃಪಾ ಆಳ್ವ
ವಿಚಾರಣೆ ವೇಳೆ, ಮಂಗಳೂರು ಮೂಲದ ರಾಕೇಶ್ ಶೆಟ್ಟಿ ಕೆಲವರ ರಹಸ್ಯ ಬಯಲು ಮಾಡುವ ಕುರಿತು ಚರ್ಚಿಸಿದ್ದರು. ಆದರೆ, ಇದು ಕುಟುಕು ಕಾರ್ಯಾಚರಣೆ ಎಂಬುದು ತಮಗೆ ತಿಳಿದಿರಲಿಲ್ಲ ಹಾಗೂ ವೀಡಿಯೋದಲ್ಲಿರುವ ಸಂತ್ರಸ್ತೆ ಯಾರು ಎಂಬುದೂ ಗೊತ್ತಿಲ್ಲ ಎಂದು ಕೃಪಾ ಆಳ್ವ ಹೇಳಿಕೆ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ರಾಕೇಶ್ ಶೆಟ್ಟಿ ಅವರನ್ನು ಮಂಗಳೂರಿನ ಹೋಟೆಲ್ ಸಮೀಪ ಭೇಟಿಯಾಗಿ ಚರ್ಚಿಸಿದ್ದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರಿಗಾಗಿ ಪೊಲೀಸರ ಹುಡುಕಾಟ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಜೆಡಿಎಸ್ ಕಾರ್ಯಕರ್ತರಾದ ಮೋಹನ್ ಗೌಡ ಮತ್ತು ಚಂದನ್ ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮೋಹನ್ ಗೌಡ ಅವರ ಬ್ಯಾಡರಹಳ್ಳಿ ನಿವಾಸದಲ್ಲಿ ಪರಿಶೀಲನೆ ನಡೆಸಿ ಪೆನ್ಡ್ರೈವ್ಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಇಬ್ಬರಿಗೂ ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಮೂರು ಬಾರಿ ನೋಟಿಸ್ ನೀಡಿದ್ದರು ಎನ್ನಲಾಗಿದೆ.
ಇದಲ್ಲದೆ, ಪ್ರಕರಣದಲ್ಲಿ ಎಸ್. ಶಿವಸ್ವಾಮಿ ಎಂಬ ಹೆಸರೂ ಕೇಳಿಬಂದಿದ್ದು, ಅವರ ಪತ್ತೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವೀಡಿಯೋದಲ್ಲಿರುವ ಮಹಿಳೆಯನ್ನೂ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದ ಸಂಪೂರ್ಣ ಹಿನ್ನೆಲೆ, ವೀಡಿಯೋ ಚಿತ್ರೀಕರಣದ ಉದ್ದೇಶ ಹಾಗೂ ಇದರಲ್ಲಿ ಭಾಗಿಯಾಗಿರುವವರ ಪಾತ್ರದ ಕುರಿತು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

