ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ರಾಜ್ಯ ರಾಜಕೀಯ ಈಗ ಮಹತ್ವದ ತಿರುವಿನಲ್ಲಿದ್ದು, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತ ಊಹಾಪೋಹಗಳು ತೀವ್ರಗೊಂಡಿವೆ. ಕಳೆದ ಕೆಲವು ದಿನಗಳಿಂದ ಒಳಗೊಳಗೇ ನಡೆಯುತ್ತಿದ್ದ ಅಧಿಕಾರದ ಚರ್ಚೆಗಳು ಇದೀಗ ಬಹಿರಂಗ ರಾಜಕೀಯ ಬೆಳವಣಿಗೆಯಾಗಿ ಪರಿಣಮಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿ ಬೆಂಗಳೂರಿಗೆ ಮರಳಿರುವ ಸಿಎಂ ಸಿದ್ದರಾಮಯ್ಯ, ಗುರುವಾರ ಬೆಳಗ್ಗೆ ಸಚಿವರು ಹಾಗೂ ಕಾಂಗ್ರೆಸ್ ಶಾಸಕರಿಗೆ ತುರ್ತು “ಬ್ರೇಕ್‌ಫಾಸ್ಟ್ ಮೀಟಿಂಗ್” ಕರೆದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಜೊತೆಗೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೋರಿರುವ ಬೆಳವಣಿಗೆ, ಸಿಎಂ ರಾಜೀನಾಮೆ ಸಾಧ್ಯತೆಗಳ ಬಗ್ಗೆ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ.
ರಾಜಕೀಯ ಮೂಲಗಳ ಪ್ರಕಾರ, ಹೈಕಮಾಂಡ್ ನಾಯಕರೊಂದಿಗೆ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಮಹತ್ವದ ಷರತ್ತೊಂದನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಪಕ್ಷದ ನಿರ್ಧಾರಕ್ಕೆ ಗೌರವ ನೀಡಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧನಿದ್ದರೂ, ತಮ್ಮ ನಂತರದ ಮುಖ್ಯಮಂತ್ರಿಯಾಗಿ G. ಪರಮೇಶ್ವರ ಅವರನ್ನು ನೇಮಕ ಮಾಡಬೇಕು ಎಂದು ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ಅವರ ಹೆಸರನ್ನು ಮುಂದಿರಿಸಿರುವುದರ ಹಿಂದೆ ಸ್ಪಷ್ಟ ರಾಜಕೀಯ ಲೆಕ್ಕಾಚಾರವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ದೀರ್ಘಕಾಲದ ಆಡಳಿತ ಮತ್ತು ಸಂಘಟನಾ ಅನುಭವ, ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಹಿನ್ನೆಲೆ ಹಾಗೂ ಅವರ ಸ್ವಚ್ಛ ರಾಜಕೀಯ ಇಮೇಜ್ ಅನ್ನು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅನುಭವ, ಸಂಘಟನೆ ಹಾಗೂ ಆಡಳಿತ ಸಾಮರ್ಥ್ಯದ ದೃಷ್ಟಿಯಿಂದ ಪರಮೇಶ್ವರ್ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.


