Tuesday, June 23, 2026
Flats for sale
Homeಕ್ರೈಂಬೆಂಗಳೂರು : ಲೀವ್-ಇನ್ ಸಂಬಂಧಕ್ಕೆ ವಿರೋಧ : ಪ್ರಿಯಕರನ ಜೊತೆ ಸೇರಿ ಹೆತ್ತವರು-ತಂಗಿಯ ಕೊಲೆ ಮಾಡಿ...

ಬೆಂಗಳೂರು : ಲೀವ್-ಇನ್ ಸಂಬಂಧಕ್ಕೆ ವಿರೋಧ : ಪ್ರಿಯಕರನ ಜೊತೆ ಸೇರಿ ಹೆತ್ತವರು-ತಂಗಿಯ ಕೊಲೆ ಮಾಡಿ ಮಗಳು ಪರಾರಿ!

ಬೆಂಗಳೂರು : ಲೀವ್-ಇನ್ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರ ಸೇರಿ ತಂಗಿ ಮತ್ತು ಹೆತ್ತವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಕೆಆರ್ ಪುರಂ ವ್ಯಾಪ್ತಿಯ ಸೀಗೆಹಳ್ಳಿ ಸಮೀಪದ ಸಾಯಿ ಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರನ್ನು ಸೋಮಸುಂದರ್, ಮುತ್ತುಲಕ್ಷ್ಮೀ ಹಾಗೂ ಸುಪ್ರಿಯಾ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿಗಳಾದ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಘಟನೆ ಬಳಿಕ ಪರಾರಿಯಾಗಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಶ್ವೇತಾ ಕಳೆದ ಒಂದೂವರೆ ತಿಂಗಳಿನಿಂದ ಕೆನತ್ ಜೊತೆ ಲೀವ್-ಇನ್ ಸಂಬಂಧದಲ್ಲಿದ್ದು, ಇಬ್ಬರೂ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ಕರೆತರಲು ಬಂದಿದ್ದ ಪೋಷಕರು ಹಾಗೂ ತಂಗಿಯೊಂದಿಗೆ ಶ್ವೇತಾ ಮತ್ತು ಕೆನತ್ ನಡುವೆ ವಾಗ್ವಾದ ನಡೆದಿದೆ.

ವಿವಾದ ತಾರಕಕ್ಕೇರಿದ ವೇಳೆ ಕೆನತ್ ಚಾಕುವಿನಿಂದ ಮೂವರ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಮುತ್ತುಲಕ್ಷ್ಮೀ ಹಾಗೂ ಸುಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ರಕ್ತದ ಮಡುವಿನಲ್ಲಿದ್ದರೂ ಮನೆಯಿಂದ ಹೊರಬಂದು ಸ್ಥಳೀಯರ ಸಹಾಯ ಕೋರಿದ್ದಾರೆ.

ಸ್ಥಳೀಯರು 112ಕ್ಕೆ ಕರೆ ಮಾಡಿದ ಬಳಿಕ ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಿ ಸೋಮಸುಂದರ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಅವರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

ಸಾವಿಗೂ ಮುನ್ನ ಸೋಮಸುಂದರ್ ಪೊಲೀಸರಿಗೆ, “ಮಗಳು ತನ್ನ ಬಾಯ್‌ಫ್ರೆಂಡ್ ಜೊತೆ ಲೀವ್-ಇನ್ ಸಂಬಂಧದಲ್ಲಿದ್ದಳು. ಇದು ಸರಿಯಲ್ಲ ಎಂದು ತಿಳಿಸಲು ಬಂದಿದ್ದೆವು. ಈ ವೇಳೆ ಚಾಕುವಿನಿಂದ ಹಲ್ಲೆ ನಡೆಸಿದರು” ಎಂದು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಘಟನೆ ಬಳಿಕ ಶ್ವೇತಾ ಹಾಗೂ ಕೆನತ್ ಪರಾರಿಯಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಕೆಆರ್ ಪುರಂ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular